* ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿದ ಕಲ್ಲಿದ್ದಲು ಪೂರೈಕೆ* ದಾಖಲೆಯ ಶೇ.27ರಷ್ಟುಹೆಚ್ಚು ಕಲ್ಲಿದ್ದಲು ಉತ್ಪಾದನೆ* ಕಲ್ಲಿದ್ದಲು ಹಾಹಾಕಾರ ತಡೆಗೆ ಕಂಪನಿ ಕ್ರಮ* ಬಿರುಬೇಸಿಗೆಯಿಂದ ವಿದ್ಯುತ್‌ಗೆ ಭಾರೀ ಬೇಡಿಕೆ’* ‘ಹೀಗಾಗಿ ಪೂರೈಕೆ ಹೆಚ್ಚಿದ್ದರೂ ಕಲ್ಲಿದ್ದಲು ಕೊರತೆ’
ನವದೆಹಲ(ಏ.20): ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗುತ್ತಿದ್ದಂತೆಯೇ, ಭಾರತದ ಅತಿದೊಡ್ಡ ಕಲ್ಲಿದ್ದಲು ಪೂರೈಕೆ ಕಂಪನಿಯಾದ ‘ಕೋಲ್ ಇಂಡಿಯಾ ಲಿಮಿಟೆಡ್’, ಕಲ್ಲಿದ್ದಲು ಪೂರೈಕೆಯನ್ನು ಶೇ.14ರಷ್ಟುಹೆಚ್ಚಿಸಿದೆ. ‘ಆದರೆ ಈ ವರ್ಷದ ಬೇಸಿಗೆಯಲ್ಲಿ ಅಂದಾಜಿಗಿಂತ ಹೆಚ್ಚು ಬಿಸಿಲು ಇರುವ ಕಾರಣ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪೂರೈಕೆ ಹೆಚ್ಚಿದ್ದರೂ ಅದು ಸಾಲುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
ಕರ್ನಾಟಕ ಸೇರಿ 10ಕ್ಕೂ ಹೆಚ್ಚು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಅಭಾವ ಉಂಟಾಗಿದೆ. ಹೀಗಾಗಿ ಈ ಸ್ಥಾವರಗಳಲ್ಲಿನ ಹಲವು ಘಟಕಗಳು ವಿದ್ಯುತ್ ಉತ್ಪಾದನೆಯನ್ನೇ ನಿಲ್ಲಿಸಿವೆ. ಪೂರೈಕೆ ಕೊರತೆ ಕಾರಣವನ್ನು ಅವು ನೀಡಿವೆ. ಇದರ ಬೆನ್ನಲ್ಲೇ ಕೋಲ್ ಇಂಡಿಯಾ ಸ್ಪಷ್ಟೀಕರಣ ನೀಡಿದ್ದು, ಕಲ್ಲಿದ್ದಲು, ವಿದ್ಯುತ್ ಹಾಗೂ ರೈಲ್ವೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪೂರೈಕೆ ಹೆಚ್ಚಿಸಲಾಗಿದೆ ಎಂದಿದೆ.
‘ಏಪ್ರಿಲ್ 2021ರ ಮೊದಲಾರ್ಧಕ್ಕಿಂತ ಈ ವರ್ಷ ಏಪ್ರಿಲ್‌ನಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಶೇ.14.2ರಷ್ಟುಹೆಚ್ಚು ಕಲ್ಲಿದ್ದಲು ಪೂರೈಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ನಿತ್ಯ 1.43 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಸಲಾಗುತ್ತಿತ್ತು. ಈ ಸಲ ಉತ್ಪಾದನೆ 1.6 ಮೆಟ್ರಿಕ್ ಟನ್‌ಗೆ ಹೆಚ್ಚಿದೆ. ಏಪ್ರಿಲ್ ಮೊದಲಾರ್ಧದಲ್ಲಿ ಒಟ್ಟು 26.4 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದಿಸಲಾಗಿದ್ದು, ಇದು ಕಳೆದ ಸಲಕ್ಕಿಂತ ಶೇ.27ರಷ್ಟುಅಧಿಕ. ಒಟ್ಟಾರೆ ಏಪ್ರಿಲ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ದಾಖಲೆಯ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ’ ಎಂದು ಕೋಲ್ ಇಂಡಿಯಾ ಹೇಳಿದೆ.
ಇನ್ನು ಕೆಲವು ಸ್ಥಾವರಗಳು ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿವೆ. ಅವು ನಿಗದಿತ ಪ್ರಮಾಣದಲ್ಲಿ ಆಮದು ಮಾಡಿಕೊಂಡರೆ ಪರಿಸ್ಥಿತಿ ಸರಿಹೋಗಲಿದೆ ಎಂದು ಅದು ತಿಳಿಸಿದೆ.
ದೇಶದ ಉಷ್ಣ ಸ್ಥಾವರಗಳಿಗೆ ಶೇ.80ರಷ್ಟುಕಲ್ಲಿದ್ದಲನ್ನು ಕೋಲ್ ಇಂಡಿಯಾ ಪೂರೈಸುತ್ತದೆ.
