* 24 ದಿನಕ್ಕಾಗುವಷ್ಟು ಕಲ್ಲಿದ್ದಲಿದೆ: ಸಚಿವ ಜೋಶಿ* ಕಲ್ಲಿದ್ದಲು ಕೊರತೆ ಭೀತಿ ಬೇಡ, ವಿದ್ಯುತ್‌ ಸಮಸ್ಯೆ ಇಲ್ಲ: ಕೇಂದ್ರ* ಇನ್ನಷ್ಟು ಹೆಚ್ಚು ಪೂರೈಕೆಗೆ ಕ್ರಮ: ಸಚಿವ ಸಿಂಗ್‌

ನವದೆಹಲಿ(ಅ.11): ಕಲ್ಲಿದ್ದಲು(Coal) ಸಮಸ್ಯೆ ಉಂಟಾಗಿರುವ ಕಾರಣ ವಿದ್ಯುತ್‌ ಕ್ಷಾಮ ತಲೆದೋರುವ ಭೀತಿ ಎದುರಾಗಿರುವ ನಡುವೆಯೇ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ(Minister Pralhad Joshi) ಹಾಗೂ ಇಂಧನ ಸಚಿವ ಆರ್‌.ಕೆ.ಸಿಂಗ್‌ (RK Singh)ಅವರು, ‘ವಿದ್ಯುತ್‌ ಅಭಾವ ಆಗುವ ಯಾವುದೇ ಸಾಧ್ಯತೆ ಇಲ್ಲ. ಅಂಥ ಅನವಶ್ಯಕ ಆತಂಕ ಬೇಡ’ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಕಲ್ಲಿದ್ದಲು ಕೊರತೆಯಿಂದ ಉಷ್ಣ ವಿದ್ಯುತ್‌ ಸ್ಥಾವರಗಳು ಬಂದ್‌ ಆಗಬಹುದು ಎಂದು ರಾಜ್ಯಗಳು ಆತಂಕ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ‘ವಿದ್ಯುತ್‌(Electricity) ಕೊರತೆ ಎದುರಾಗುವ ಯಾವುದೇ ಸಾಧ್ಯತೆ ಇಲ್ಲ. 43 ದಶಲಕ್ಷ ಟನ್‌ನಷ್ಟು ಕಲ್ಲಿದ್ದಲು ಕೋಲ್‌ ಇಂಡಿಯಾ ಬಳಿ ಲಭ್ಯವಿದೆ. ಇದು 24 ದಿನಕ್ಕೆ ಆಗುವಷ್ಟು ಕಲ್ಲಿದ್ದಲು(Coal)’ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು, ತಮ್ಮನ್ನು ಭೇಟಿಯಾದ ದಿಲ್ಲಿ ವಿದ್ಯುತ್‌ ಸಚಿವ ಸತ್ಯೇಂದ್ರ ಜೈನ್‌(Satyendra Jain) ಅವರ ಜತೆಗಿನ ಚರ್ಚೆ ಬಳಿಕ ಪ್ರತಿಕ್ರಿಯೆ ನೀಡಿರುವ ಆರ್‌.ಕೆ.ಸಿಂಗ್‌ ‘ಈಗ ವಿದ್ಯುತ್‌ ಸ್ಥಾವರಗಳಲ್ಲಿ 4 ದಿನಕ್ಕೆ ಆಗುವಷ್ಟುಕಲ್ಲಿದ್ದಲು ದಾಸ್ತಾನಿದೆ. ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚಿನ ಕಲ್ಲಿದ್ದಲು ಪೂರೈಸಲಾಗುತ್ತಿದೆ. ಕಲ್ಲಿದ್ದಲು ಪೂರೈಕೆಗೆ ಕಲ್ಲಿದ್ದಲು ನಿಗಮಕ್ಕೆ ಕೂಡ ಸೂಚಿಸಲಾಗಿದೆ. ವಿದ್ಯುತ್‌ ಆತಂಕ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿದೇಶದಲ್ಲಿ ಕಲ್ಲಿದ್ದಲು ದರ ಹೆಚ್ಚಿದ್ದರಿಂದ ಭಾರತವು ಆಮದು ಕಡಿಮೆ ಮಾಡಿಕೊಂಡಿದೆ. ಇದೇ ವೇಳೆ ಭಾರತದಲ್ಲಿ ಮಳೆ ಅಧಿಕವಾಗಿದ್ದರಿಂದ ಕಲ್ಲಿದ್ದಲು ಗಣಿಗಳಲ್ಲಿ ಉತ್ಖನನಕ್ಕೆ ಅಡ್ಡಿಯಾಗಿದೆ. ಜೊತೆಗೆ, ನಿರೀಕ್ಷೆಗೂ ಮೀರಿ ವಿದ್ಯುತ್‌ ಬೇಡಿಕೆ ಹೆಚ್ಚಿದ್ದರಿಂದ ಹಠಾತ್‌ ಕಲ್ಲಿದ್ದಲು ಕ್ಷಾಮ ದೇಶದಲ್ಲಿ ತಲೆದೋರಿದೆ.

ಕೇಂದ್ರ ಸರ್ಕಾರಕ್ಕೆ ಮೊರೆ:

ಈ ನಡುವೆ ಕೇಂದ್ರ ಸರ್ಕಾರದ ಭರವಸೆ ಹೊರತಾಗಿಯೂ ಕಲ್ಲಿದ್ದಲು ಸಮಸ್ಯೆ ನಿಧಾನವಾಗಿ ದೇಶಾದ್ಯಂತ ಬಹುತೇಕ ರಾಜ್ಯಗಳನ್ನು ಆವರಿಸಿಕೊಳ್ಳುತ್ತಿದೆ. ಹೀಗಾಗಿ ತಕ್ಷಣಕ್ಕೆ ಪೂರೈಕೆ ಹೆಚ್ಚದೇ ಹೋದಲ್ಲಿ, ಹಲವು ರಾಜ್ಯಗಳಲ್ಲಿ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿವೆ.

ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ 3-4 ಗಂಟೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದಾರೆ. ಇದರ ಜೊತೆಗೆ ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಬಿಹಾರ, ದೆಹಲಿ, ಗುಜರಾತ್‌ ಹಾಗೂ ಹರ್ಯಾಣ ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನು ಕಲ್ಲಿದ್ದಲು ಪೂರೈಕೆ ಹೆಚ್ಚಳವಾಗದಿದ್ದರೆ ಲೋಡ್‌ ಶೆಡ್ಡಿಂಗ್‌ ಅನಿವಾರ್ಯ ಎಂದು ಕೇರಳ ಸರ್ಕಾರ ಹೇಳಿದೆ.

"