* ಗ್ರಾಹಕರಿಗೆ ಮಾತ್ರ ವಿದ್ಯುತ್‌ ಪೂರೈಸಿ* ವಿದ್ಯುತ್‌ ಕಂಪ​ನಿ​ಗ​ಳಿಗೆ ಮಾರಿ​ಕೊ​ಳ್ಳ​ಬೇ​ಡಿ* ಕೇಂದ್ರ ಸರ್ಕಾ​ರದಿಂದ ಎಚ್ಚ​ರಿಕೆ ಪತ್ರ

ನವ​ದೆ​ಹ​ಲಿ(ಅ.13): ಕಲ್ಲಿ​ದ್ದಲು ಕೊರ​ತೆ​ಯಿಂದCoal Crisis) ವಿದ್ಯುತ್‌ ಕ್ಷಾಮ(Electricity Shortage) ಉಂಟಾ​ಗುವ ಭೀತಿ ಎದು​ರಾ​ಗಿ​ರುವ ಸಂದ​ರ್ಭ​ವನ್ನು ರಾಜ್ಯ​ಗಳು ‘ದು​ರ್ಲಾ​ಭ’ ಮಾಡಿ​ಕೊ​ಳ್ಳಲು ಬಳ​ಸ​ಬಾ​ರದು ಎಂದು ಕೇಂದ್ರ ಸರ್ಕಾ​ರವು ರಾಜ್ಯ​ಗ​ಳಿಗೆ ಎಚ್ಚ​ರಿ​ಸಿ​ದೆ.

ಈ ಬಗ್ಗೆ ಸೋಮ​ವಾರ ಪತ್ರ ಬರೆ​ದಿ​ರುವ ಕೇಂದ್ರ ಇಂಧನ ಸಚಿ​ವಾ​ಲ​ಯ, ‘ಯಾವುದೇ ರಾಜ್ಯಗಳು ವಿದ್ಯುತ್‌ ಅನ್ನು ಗ್ರಾಹಕರಿಗೆ ಪೂರೈಸುವು​ದನ್ನು ಬಿಟ್ಟು ಹೆಚ್ಚಿನ ದರಕ್ಕೆ ಇತರ ವಿದ್ಯುತ್‌ ವಿನಿ​ಮಯ ಕಂಪ​ನಿ​ಗ​ಳಿಗೆ ಮಾರಿಕೊಂಡಿದ್ದು ಕಂಡುಬಂದರೆ, ಅಂಥ ರಾಜ್ಯಗಳಿಗೆ ವಿದ್ಯುತ್‌(Electricity) ಪೂರೈಕೆಯನ್ನು ಕಡಿತಗೊಳಿಸಬೇಕಾಗುತ್ತದೆ’ ಎಂದು ಎಚ್ಚ​ರಿ​ಸಿ​ದೆ.

‘ಕೆಲವು ರಾಜ್ಯಗಳು ವಿದ್ಯುತ್‌ ಅನ್ನು ತಮ್ಮ ಗ್ರಾಹಕರಿಗೆ ಪೂರೈಸದೆ ನಿರಂತರ ವಿದ್ಯುತ್‌ ಕಡಿತ ಮಾಡುತ್ತಿವೆ. ಆದರೆ ಅದೇ ವಿದ್ಯುತ್‌ ಅನ್ನು ಹೆಚ್ಚುವರಿ ದರಕ್ಕೆ ಇತರ ವಿದ್ಯುತ್‌ ವಿನಿ​ಮ​ಯ ಕಂಪನಿಗಳ ಜತೆ ವಿನಿಮಯ ಮಾಡಿಕೊಳ್ಳುತ್ತಿವೆ ಎಂಬ ದೂರು​ಗಳು ಬಂದಿವೆ’ ಎಂದು ಅದು ಹೇಳಿ​ದೆ. ಆದರೆ ಯಾವೆಲ್ಲಾ ರಾಜ್ಯಗಳು ಇಂಥ ಕೆಲಸ ಮಾಡುತ್ತಿವೆ ಎಂಬ ಯಾವುದೇ ಮಾಹಿತಿಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ.

‘ಇಂಥ ಕೆಲಸದಲ್ಲಿ ಮಗ್ನರಾಗಿರುವ ರಾಜ್ಯಗಳಿಗೆ ಅವುಗಳ ಪಾಲಿನ ವಿದ್ಯುತ್‌ ಅನ್ನು ಹಿಂಪಡೆಯಲಾಗುತ್ತದೆ. ಆ ಮಿಗತೆ ವಿದ್ಯುತ್‌ ಅನ್ನು ಅಗತ್ಯವಿರುವ ರಾಜ್ಯಗಳಿಗೆ ವಿತರಿಸಲಾಗುತ್ತದೆ’ ಎಂದು ಹೇಳಿದೆ.

ಕ​ಲ್ಲಿ​ದ್ದ​ಲು: ಕೇಂದ್ರದ ಆರೋ​ಪ​ಕ್ಕೆ ರಾಜ್ಯ​ಗಳ ಕಿಡಿ

ದೇಶದಲ್ಲಿ ಉದ್ಭವಿಸಿರುವ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್‌ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಲಿ.(ಸಿಐಎಲ್‌) ವಿರುದ್ಧ ರಾಜಸ್ಥಾನ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕಿಡಿಕಾರಿವೆ. ‘ವಿ​ದ್ಯುತ್‌ ಕ್ಷಾಮಕ್ಕೆ ರಾಜ್ಯ​ಗಳೇ ಹೊಣೆ’ ಎಂಬ ಕೇಂದ್ರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತ​ಪ​ಡಿ​ಸಿ​ವೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ‘ರಾಜ್ಯಗಳ ಕಲ್ಲಿದ್ದಲು ಬಿಕ್ಕಟ್ಟನ್ನು ಸರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ದೇಶದಲ್ಲಿ ಕಲ್ಲಿದ್ದಲು ಸಮಸ್ಯೆ ಇದೆ. ಆದರೆ ಕಲ್ಲಿದ್ದಲು ಕೊರತೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದು ದೂರಿದ್ದಾರೆ.

ಮಹಾರಾಷ್ಟ್ರ ಇಂಧನ ಸಚಿವ ನಿತಿನ್‌ ರಾವುತ್‌ ಮಾತ​ನಾ​ಡಿ, ‘ರಾಜ್ಯವು ಪ್ರಸ್ತುತ 3500-4000 ಮೆಗಾವ್ಯಾಟ್‌ನಷ್ಟುವಿದ್ಯುತ್‌ ಕೊರತೆ ಉಂಟಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಐಎಲ್‌ ಸರಿಯಾಗಿ ನಿರ್ವಹಣೆ ಮಾಡದಿರುವುದು ಮತ್ತು ಯೋಜನೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಈ ದುಃಸ್ಥಿತಿ ಎದುರಾಗಿದೆ’ ಎಂದು ಹೇಳಿದರು.