* ತೆಲಂಗಾಣ, ಆಂಧ್ರ, ಬಿಹಾರ ಹಿಂಸೆಯಲ್ಲಿ ಸೇನಾ ಕೋಚಿಂಗ್ ಸೆಂಟರ್‌ಗಳ ಪಾತ್ರ* ಸಿಕಂದರಾಬಾದ್ ಹಿಂಸೆ ರೂವಾರಿ, ಡಿಫೆನ್ಸ್ ಅಕಾಡೆಮಿ ಮಾಲೀಕ ಸುಬ್ಬರಾವ್ ಸೆರೆ* ವಾಟ್ಸಾಪ್ ಗ್ರೂಪ್ ರಚಿಸಿ ದಂಗೆಗೆ ಪ್ರೇರಣೆ: ಪೊಲೀಸರಿಗೆ ಸಾಕ್ಷ್ಯ ಲಭ್ಯ
ವಿಜಯವಾಡ/ಪಟನಾ(ಜೂ,.20): ಅಗ್ನಿಪಥ ಯೋಜನೆ ವಿರುದ್ಧ ಭಾರೀ ಹಿಂಸಾಚಾರದ ತಾಣಗಳಾಗಿರುವ ತೆಲಂಗಾಣ, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿನ ದುಷ್ಕೃತ್ಯದಲ್ಲಿ ಸ್ಥಳೀಯ ಕೋಚಿಂಗ್ ಸೆಂಟರ್‌ಗಳ ಕೈವಾಡವಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇದೇ ಆರೋಪದ ಹಿನ್ನೆಲೆಯಲ್ಲಿ ಓರ್ವನ ಸಾವಿಗೆ ಕಾರಣವಾದ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣ ಹಿಂಸಾಚಾರದ ಪ್ರಮುಖ ರೂವಾರಿ ಅವಲು ಸುಬ್ಬರಾವ್ ಎಂಬಾತನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ತೆಲಂಗಾಣದಲ್ಲಿ 45 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಬಿಹಾರ ಮತ್ತು ಆಂಧ್ರಪ್ರದೇಶ ಹಲವು ಕೋಚಿಂಗ್ ಸೆಂಟರ್‌ಗಳ ಮಾಲೀಕರು, ಶಿಕ್ಷಕರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದು, ಇನ್ನಷ್ಟುಜನರು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
ಆದರೆ ತಮ್ಮ ಮೇಲಿನ ಆರೋಪಗಳನ್ನು ಹಲವು ಕೋಚಿಂಗ್ ಸೆಂಟರ್‌ಗಳು ಮತ್ತು ಅವುಗಳ ಶಿಕ್ಷಕರು ತಳ್ಳಿಹಾಕಿದ್ದಾರೆ.
ಆಕಾಡೆಮಿ ಮಾಲೀಕನ ಪ್ರಚೋದನೆ:
ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ನೆರವು ನೀಡುವ ಕೆಲ ಕೋಚಿಂಗ್ ಸೆಂಟರ್‌ಗಳು ಅಗ್ನಿಪಥ ವಿರೋಧಿ ಹಿಂಸಾಚಾರದ ಹಿಂದಿನ ಶಕ್ತಿ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ತೆಲಂಗಾಣದಲ್ಲಿ ಸಾಯಿ ಡಿಫೆನ್ಸ್ ಅಕಾಡೆಮಿ ಮಾಲೀಕ, ನಿವೃತ್ತ ಹವಾಲ್ದಾರ್ ಅವಲು ಸುಬ್ಬರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ 9 ಕಡೆ ಕೋಚಿಂಗ್ ಸೆಂಟರ್‌ಗಳನ್ನು ಹೊಂದಿದ್ದ ಈಗ, ಅಗ್ನಿಪಥ ಯೋಜನೆ ಪ್ರಕಟವಾಗುತ್ತಲೇ, ವಾಟ್ಸಾಪ್ ಗ್ರೂಪೊಂದನ್ನು ಆರಂಭಿಸಿ, ಅದರಲ್ಲಿ ಯೋಜನೆ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದೂ ಅಲ್ಲದೆ, ತನ್ನ ಬಳಿ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳಿಗೆ ಹಿಂಸಾಚಾರಕ್ಕೆ ಪ್ರೇರೇಪಿಸಿದ್ದ ಎನ್ನಲಾಗಿದೆ.
ಈತನ ಕರೆಯ ಮೇರೆಗೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಹೈದರಾಬಾದ್ ಮತ್ತು ಸಿಕಂದರಾಬಾದ್‌ಗೆ ಆಗಮಿಸಿ, ರೈಲ್ವೆ ನಿಲ್ದಾಣದಲ್ಲಿ ಲೂಟಿ, ಹಿಂಸಾಚಾರ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 19 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದ. ಘಟನೆ ಕುರಿತು ಫೋನ್ ಕರೆ ಮತ್ತಿತರೆ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು, ಶನಿವಾರ ಸುಬ್ಬರಾವ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಜೊತೆಗೆ ಈತನ ಕರೆ ಮೇರೆಗೆ ಆಗಮಿಸಿ ಹಿಂಸಾಚಾರ ನಡೆಸಿದ್ದ 45 ಯುವಕರನ್ನು ಕೂಡಾ ಬಂಧಿಸಿದ್ದಾರೆ. ಇದಲ್ಲದೆ ಆಂಧ್ರ4 ಮತ್ತು ತೆಲಂಗಾಣ ಪೊಲೀಸರು ಸುಬ್ಬರಾವ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ಇನ್ನೂ 100 ಜನರ ಮಾಹಿತಿ ಕಲೆಹಾಕಿದ್ದು, ಅವರನ್ನೂ ಬಂಧಿಸಲು ಸಿದ್ಧತೆ ನಡೆಸಿದ್ದಾರೆ.
ಬಿಹಾರದಲ್ಲೂ..:
ಇನ್ನು ಬಿಹಾರದ ತಾರೆಗ್ನ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಎರಡು ಕೋಚಿಂಗ್ ಸೆಂಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಪಟನಾ ಮತ್ತು ರಾಜ್ಯದ ಇತರೆ ಭಾಗಗಳಲ್ಲ ಇರುವ ಇತರೆ 8 ಕೋಚಿಂಗ್ ಸೆಂಟರ್‌ಗಳ ಕೂಡಾ ಹಿಂಸೆಗೆ ಪ್ರಚೋದನೆ ನೀಡಿದ ಮಾಹಿತಿ ಸಿಕ್ಕಿದೆ. ಹಿಂಸಾಕೃತ್ಯಗಳಿಗೆ ಸಂಬಂಧಿಸಿದಂತೆ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ 700 ಪ್ರತಿಭಟನಾಕಾರರನ್ನು ಗುರುತಿಸಿ ಬಂಧಿಸಲಾಗಿದೆ.
ಬಂಧಿತರ ಮೊಬೈಲ್‌ನ ವಾಟ್ಸಾಪ್‌ಗಳಲ್ಲಿ, ಕೋಚಿಂಗ್ ಸೆಂಟರ್ ನಿರ್ವಹಣೆ ಮಾಡುವವರು, ‘ಏನು ಬೇಕಾದರೂ ಮಾಡಿ, ಆದರೆ ಅಗ್ನಿಪಥ ಯೋಜನೆಯನ್ನು ಬಲವಾಗಿ ವಿರೋಧಿಸಿ. ನಿಮ್ಮ ಶಕ್ತಿ, ಸಾಮರ್ಥ್ಯ, ಧೈರ್ಯವನ್ನು ನಿಮ್ಮ ಪೋಷಕರ ಮುಂದಲ್ಲ, ಬದಲಾಗಿ ಸರ್ಕಾರದ ಮುಂದೆ ತೋರಿಸಿ’ ಎಂದು ಕರೆಕೊಟ್ಟಿರುವ ಭಾಷಣದ ವಿಡಯೋಗಳು ಸಿಕ್ಕಿವೆ.
ಇನ್ನು ಬಂಧಿತ ಪೈಕಿ ಕೆಲವರು 6 ತಿಂಳ ಹಿಂದೆ ರೈಲ್ವೆ ನೇಮಕಾತಿ ವೇಳೆ ನಡೆದ ಹಿಂಸಾಚಾರಗಳಲ್ಲೂ ಭಾಗಿಯಾದ ಮಾಹಿತಿ ಸಿಕ್ಕಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ
