ಮುಂಬೈ(ಜು.09): ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಮುಂಬೈನ ದಾದರ್‌ನಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಐತಿಹಾಸಿಕ ‘ರಾಜಗೃಹ’ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಹಲವು ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸ್‌ ಮೂಲಗಳ ಪ್ರಕಾರ, ಮಂಗಳವಾರ ಸಂಜೆ ಅಂಬೇಡ್ಕರ್‌ ಅವರ ರಾಜಗೃಹ ನಿವಾಸಕ್ಕೆ ಕನಿಷ್ಠ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳನುಗ್ಗಿ ಸಿಸಿಟಿವಿ ಕ್ಯಾಮೆರಾ, ಗಾಜಿನ ಕಿಟಕಿಗಳು ಮತ್ತು ಹೂ ಕುಂಡಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. 

ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕೃತ್ಯವನ್ನು ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ರಾಜಗೃಹ ನಿವಾಸದ ಮೇಲಿನ ದಾಳಿಯನ್ನು ಸಹಿಸಲು ಅಸಾಧ್ಯ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದಿದ್ದಾರೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಆರೈಕೆ ಮಾಡಿದ್ದ ಜಿಗನಬಿ ಬಾಪುಲಾಲ್ ಪಟೇಲ ಇನ್ನಿಲ್ಲ

ದಾದರ್‌ನ ಹಿಂದು ಕಾಲೋನಿಯಲ್ಲಿರುವ ಎರಡು ಅಂತಸ್ತಿನ ನಿವಾಸ ಇದಾಗಿದೆ. ಬಾಬಾ ಸಾಹೇಬ್‌ ಅವರ ಪುಸ್ತಕ, ಫೋಟೋ, ಚಿತಾಭಸ್ಮ ಮತ್ತಿತರೆ ಸಾಮಗ್ರಿ ಹೊಂದಿರುವ ಮ್ಯೂಸಿಯಂ ಕೂಡ ಇದೆ. ಸದ್ಯ ಈ ನಿವಾಸದಲ್ಲಿ ಅಂಬೇಡ್ಕರ್‌ ಅವರ ಸೊಸೆ, ಮರಿಮೊಮ್ಮಕ್ಕಳಾದ ಪ್ರಕಾಶ್‌ ಅಂಬೇಡ್ಕರ್‌, ಆನಂದರಾವ್‌ ಹಾಗೂ ಭೀಮರಾವ್‌ ಅವರು ವಾಸ ಮಾಡುತ್ತಿದ್ದಾರೆ.