ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಸುಲಭವಾಗಿ ಸಿಗಲಿದೆ ಪಾಸ್‌ಪೋರ್ಟ್, ಒಪ್ಪಂದ ನವೀಕರಿಸಿದ MEA
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಇನ್ನು ಸುಲಭವಾಗಿ, ಯಾವುದೇ ಅಡ ತಡೆ ಇಲ್ಲದೆ ಪಾಸ್‌ಪೋರ್ಟ್ ಲಭ್ಯವಾಗಲಿದೆ. ಇದಕ್ಕಾಗಿ ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಪೋಸ್ಟ್ ಆಫೀಸ್ ಒಪ್ಪಂದ ನವೀಕರಿಸಿದೆ.
ನವದೆಹಲಿ(ಡಿ.06) ಭಾರತೀಯ ವಿದೇಶಾಂಗ ಇಲಾಖೆ ಹಾಗೂ ಪೋಸ್ಟ್ ಆಫೀಸ್ ನಡುವಿನ ಒಪ್ಪಂದ ನವೀಕರಿಸಲಾಗಿದೆ. ಇದರಿಂದ ಇನ್ನು ದೇಶಾದ್ಯಂತ ಪೋಸ್ಟ್ ಅಫೀಸ್ ಕೇಂದ್ರಗಳಲ್ಲಿ ಸುಲಭವಾಗಿ ಪಾಸ್‌ಪೋರ್ಟ್ ಲಭ್ಯವಾಗಲಿದೆ. ಪಾಸ್‌ಪೋರ್ಟ್‌ಗಾಗಿ ದೂರದ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ತೆರಳಬೇಕಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಕೇಂದ್ರದಲ್ಲೇ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿದೆ. ಇದಕ್ಕಾಗಿ ಭಾರತೀಯ ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಕೆಜೆ ಶ್ರೀನಿವಾಸ ಹಾಗೂ ಅಂಚೆ ಇಲಾಖೆ ವ್ಯಾಪಾರ ಅಭಿವೃದ್ಧಿ ನಿರ್ದೇಶನಲಾಯದ ಮ್ಯಾನೇಜರ್ ಎಂಎಸ್ ಮನೀಶ್ ಬನ್ಸಾಲ್ ಬಾದಲ್ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಪೋಸ್ಟ್ ಆಫೀಸ್ ಹಾಗೂ ವಿದೇಶಾಂಗ ಇಲಾಖೆ ನಡುವಿನ ಒಪ್ಪಂದ ನವೀಕರಿಸಿ ಇದೀಗ ದೇಶಾದ್ಯಂತ ಹಂತ ಹಂತವಾಗಿ ಪೋಸ್ಟ್ ಆಫೀಸ್ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ವರ್ಧನೆ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಭಾರತದಲ್ಲಿ ಪೋಸ್ಟ್ ಆಫೀಸ್ ಮೂಲಕ ಪಾಸ್‌ಪೋರ್ಟ್ ನೀಡುವ ಯೋಜನೆಯಾದ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ(POPSKs) 2017ರಲ್ಲಿ ಆರಂಭಿಸಲಾಗಿತ್ತು. ಆದರೆ ಕೆಲವೇ ಕೆಲವು ಪೋಸ್ಟ್ ಆಫೀಸ್‌ಗೆ ಸೀಮಿತವಾಗಿತ್ತು. ಸದ್ಯ ಭಾರತದಲ್ಲಿ 442 ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ವರ್ಷ ಹೆಚ್ಚುವರಿಯಾಗಿ 600 ಕೇಂದ್ರಗಳು ಆರಂಭಗೊಳ್ಳುತ್ತಿದೆ. ಇದರಿಂದ ಪ್ರತಿ ಜಿಲ್ಲಾ ಪೋಸ್ಟ್ ಆಫೀಸ್ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸೇವೆ ನೀಡಲಿದೆ.
ಮೃತರ ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ ದಾಖಲೆಗಳನ್ನು ಏನು ಮಾಡಬೇಕು?
ಸದ್ಯ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ವಾರ್ಷಿಕ 35 ಲಕ್ಷ ಮಂದಿಗೆ ಪಾಸ್‌ಪೋರ್ಟ್ ಸೇವೆ ನೀಡುತ್ತಿದೆ. ಈ ಸಂಖ್ಯೆಯನ್ನು ಮುಂದಿನ 5 ವರ್ಷದಲ್ಲಿ 1 ಕೋಟಿಗೆ ಏರಿಸಲು ಈ ಯೋಜನೆ ಸಹಕಾರಿಯಾಗಲಿದೆ. ಆನ್‌ಲೈನ್ ಮೂಲಕ ಆ್ಯಪ್ಲಿಕೇಶನ್ ಹಾಕಿದರೂ ಪ್ರಮುಖವಾಗಿ ಹಳ್ಳಿ, ಪಟ್ಟಣ ಪ್ರದೇಶಗಳಿಂದ ಜನರು ನಗರಕ್ಕೆ ಆಗಮಿಸಿ ವೆರಿಫಿಕೇಶನ್ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ತೆರಳಬೇಕಿತ್ತು. ಈ ಮೂಲಕ ಪಾಸ್‌ಪೋರ್ಟ್ ಪಡೆಯಲು ಭಾರಿ ಕಸರತ್ತು ನಡೆಸಬೇಕಾದ ಅನಿವಾರ್ಯ ಎದುರಾಗಿತ್ತು. ಆದರೆ ಇನ್ನು ಮುಂದೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ನಲ್ಲಿ ಈ ಸೌಲಭ್ಯ ಲಭ್ಯವಾಗುವ ಕಾರಣ ಪಾಸ್‌ಪೋರ್ಟ್ ಪಡೆಯುದುವು ಅತೀ ಸುಲಭ ಹಾಗೂ ಸರಳವಾಗಲಿದೆ.
POPSKs ನವೀಕರಿಸಿದ ಒಪ್ಪಂದದಲ್ಲಿ ದೇಶಾದ್ಯಂತ ಪೋಸ್ಟ್ ಆಫೀಸ್ ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಹಂತ ಹಂತವಾಗಿ ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಇದರಿಂದ ಪೋಸ್ಟ್ ಆಫೀಸ್ ಸೇವೆ ಮತ್ತೊಂದು ಮಹತ್ವದ ಸೇವೆಗೆ ತೆರೆದುಕೊಳ್ಳುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿರುವ ನಾಗರೀಕನಿಗೆ ತನ್ನ ಹತ್ತಿರದ ಪೋಸ್ಟ್ ಆಫೀಸ್ ಮೂಲಕ ಪಾಸ್‌ಪೋರ್ಟ್ ಪಡೆಯುವ ಈ ಸೇವೆಯನ್ನೂ ಗ್ರಾಮೀಣ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಕೇಂದ್ರ ಸರ್ಕಾರದ ಈ ಮಹತ್ವದ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹತ್ತಿರದ ಪೋಸ್ಟ್ ಆಫೀಸ್ ಮೂಲಕವೇ ಪಾಸ್‌ಪೋರ್ಟ್ ಸೇವೆ ಲಭ್ಯವಾಗುತ್ತಿರುವುದರಿಂದ ತ್ವರಿತವಾಗಿ, ಯಾವುದೇ ವಿಳಂಬವಿಲ್ಲದೆ ಪಾಸ್‌ಪೋರ್ಟ್ ಲಭ್ಯವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಭಾರತೀಯ ವಿದೇಶಾಂಗ ಇಲಾಖೆ ದೇಶಾದ್ಯಂತ 36 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಹೊಂದಿದೆ. ಇನ್ನು ವಿದೇಶಗಳಲ್ಲಿ 190 ಪಾಸ್‌ಪೋರ್ಟ್ ಮಿಶನ್ ಹಾಗೂ ಸೇವಾ ಕೇಂದ್ರಗಳನ್ನು ಹೊಂದಿದೆ. ಪೋಸ್ಟ್ ಆಫೀಸ್ ಮೂಲಕ ಪಾಸ್‌ಪೋರ್ಟ್ ಸೇವೆ ವರ್ಧನೆಯಿಂದ ಜನರು ಪ್ರಯಾಸ ಪಡಬೇಕಿಲ್ಲ. ಚಾಲ್ತಿಯಲ್ಲಿರುವ ಸೇವೆಯನ್ನು ವರ್ಧಿಸಲು ಒಪ್ಪಂದ ನವೀಕರಣ ಮಹತ್ವದ ಪಾತ್ರ ನಿರ್ವಹಿಸಲಿದೆ. ಹಳ್ಳಿ ಹಳ್ಳಿಗಳ ಪೋಸ್ಟ್ ಆಫೀಸ್ ಕೇಂದ್ರಗಲ್ಲಿ ಪಾಸ್‌ಪೋರ್ಟ್ ಸೇವೆಗಳು ಲಭ್ಯವಾಗಲಿದೆ.