* ಜೆಡಿಯು ವಿರುದ್ಧ ಚಿರಾಗ್ ಗಂಭೀರ ಆರೋಪ* ಪಾರಸ್ಗೆ ಎಲ್ಜೆಪಿ ಸಂಸದೀಯ ನಾಯಕ ಬೇಡ* ಲೋಕಸಭೆ ಸ್ಪೀಕರ್ಗೆ ಚಿರಾಗ್ ಪಾಸ್ವಾನ್ ನಿವೇದನೆ
ನವದೆಹಲಿ(ಜೂ.17): ಬಿಹಾರದ ಲೋಕಜನ ಶಕ್ತಿ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಕಲಹವು ಇದೀಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಂಗಳವನ್ನು ತಲುಪಿದೆ. ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರನ್ನು ಲೋಕಸಭೆಯಲ್ಲಿ ಎಲ್ಜೆಪಿ ನಾಯಕರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ಕೈಬಿಡುವಂತೆ ಸ್ಪೀಕರ್ ಬಿರ್ಲಾ ಅವರಿಗೆ ಚಿರಾಗ್ ಪಾಸ್ವಾನ್ ಪತ್ರ ಬರೆದಿದ್ದಾರೆ.
ನನ್ನ ವಿರುದ್ಧದ ಪಿತೂರಿಗೆ ಕೈಜೋಡಿಸಿದ ನಮ್ಮ ಪಕ್ಷದ ಐವರು ಸಂಸದರನ್ನು ಪಕ್ಷದಿಂದ ಉಚ್ಚಾಟಿಸಿದ್ದೇನೆ. ಹೀಗಾಗಿ ಸ್ಪೀಕರ್ ಬಿರ್ಲಾ ಅವರು ಪಾರಸ್ ಕುರಿತಾದ ತಮ್ಮ ನಿರ್ಣಯವನ್ನು ಪರಿಶೀಲಿಸಬೇಕು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಪಕ್ಷ ಇಬ್ಭಾಗವಾದ ಬಳಿಕ ಬುಧವಾರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಚಿರಾಗ್, ತಮ್ಮ ಪಕ್ಷವನ್ನು ಹೋಳು ಮಾಡುವ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಕುತಂತ್ರ ಅಡಗಿದೆ. ಆದರೆ ಸಿಂಹದ ಮರಿಯಾದ ನಾನು ಇದಕ್ಕೆಲ್ಲಾ ಬಗ್ಗುವುದಿಲ್ಲ ಎಂದು ಗುಡುಗಿದರು.
‘ಈ ಹಿಂದೆ ನನ್ನ ತಂದೆ ಜೀವಂತವಿರುವಾಗಲೂ ಪಕ್ಷವನ್ನು ಒಡೆಯಲು ಜೆಡಿಯು ಯತ್ನಿಸಿತ್ತು. ಸದಾಕಾಲ ದಲಿತರ ಇಬ್ಭಾಗ ಮತ್ತು ತುಳಿತಕ್ಕೊಳಗಾದ ನಾಯಕರನ್ನು ಬಗ್ಗುಬಡಿಯುವುದೇ ಜೆಡಿಯು ಕಾಯಕವಾಗಿದೆ’ ಎಂದು ನಿತೀಶ್ ವಿರುದ್ಧ ಕಿಡಿಕಾರಿದರು.
