ನವದೆಹಲಿ(ಅ.05): ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳಿರುವಾಗ ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಆಡಳಿತಾರೂಢ ಎನ್‌ಡಿಎ ಭಾಗವಾಗಿದ್ದ ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಮೈತ್ರಿಯಿಂದ ಭಾನುವಾರ ಹೊರನಡೆದಿದೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಎನ್‌ಡಿಎ ನಿರ್ಧಾರಕ್ಕೆ ಎಲ್‌ಜೆಪಿ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗುವುದನ್ನು ಬೆಂಬಲಿಸುವುದಾಗಿ ಹೇಳಿದೆ. ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ವರಿಷ್ಠ ರಾಮವಿಲಾಸ್‌ ಪಾಸ್ವಾನ್‌ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆಸ್ಪತ್ರೆಯಲ್ಲಿದ್ದಾರೆ. ಈ ವೇಳೆ ಪಕ್ಷದ ನಾಯಕರ ಸಭೆ ನಡೆಸಿದ ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಬಿಹಾರದಲ್ಲಿ ಎನ್‌ಡಿಎದಿಂದ ಹೊರನಡೆಯುವ ಹಾಗೂ ಕೇಂದ್ರದಲ್ಲಿ ಎನ್‌ಡಿಎದಲ್ಲೇ ಮುಂದುವರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಅ.28ರಿಂದ ಮೂರು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್‌ಜೆಪಿ ಅಭ್ಯರ್ಥಿಗಳು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರ ಜೆಡಿಯು ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಆದರೆ, ಬಿಜೆಪಿ ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. 243 ಕ್ಷೇತ್ರಗಳ ಪೈಕಿ ಒಟ್ಟಾರೆ 143 ಕ್ಷೇತ್ರಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಲು ನಿರ್ಧರಿಸಿದೆ.

ಎಲ್‌ಜೆಪಿಯ ಈ ನಿರ್ಧಾರದಿಂದ ಜೆಡಿಯುಗೆ ನಷ್ಟವಾಗಿ ಆರ್‌ಜೆಡಿ ನೇತೃತ್ವದ ಕಾಂಗ್ರೆಸ್‌ ಮುಂತಾದ ಪಕ್ಷಗಳ ಒಕ್ಕೂಟಕ್ಕೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿತೀಶ್‌ ನಾಯಕತ್ವದ ವಿರುದ್ಧ ಕೆಲ ಸಮಯದಿಂದ ಎಲ್‌ಜೆಪಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿತ್ತು. ‘ಬಿಹಾರ ಮೊದಲು ಬಿಹಾರಿ ಮೊದಲು’ ಎಂಬ ತನ್ನ ಯೋಜನೆಯನ್ನು ಜಾರಿಗೊಳಿಸಲು ನಿತೀಶ್‌ ಸಹಕರಿಸಲಿಲ್ಲ ಎಂದು ಆರೋಪಿಸಿತ್ತು. ನಿತೀಶ್‌ ವಿರುದ್ಧ ಅಮಿತ್‌ ಶಾ, ಜೆ.ಪಿ.ನಡ್ಡಾ ಅವರಿಗೂ ದೂರು ನೀಡಿತ್ತು. 2015ರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಜೆಪಿ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 2 ಸೀಟು ಗೆದ್ದಿತ್ತು.