ನವದೆಹಲಿ(ಜ.31): ಸಂಸತ್ತಿನ ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಎನ್‌ಡಿಎ ಕರೆದ ಸಭೆಗೆ ಆಹ್ವಾನ ಇದ್ದರೂ ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಗೈರು ಹಾಜರಾಗಿದ್ದಾರೆ. ಇದಕ್ಕೆ ಅವರು ಅನಾರೋಗ್ಯದ ಕಾರಣ ನೀಡಿದ್ದಾರೆ.

ಆದರೆ, ಬಿಜೆಪಿಯ ಈ ನಿಲುವಿಗೆ ಜೆಡಿಯು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ಎನ್‌ಡಿಎ ಸಂಸದರ ಸಭೆಗೆ ಚಿರಾಗ್‌ ಗೈರಾಗಿರಬಹುದು ಎನ್ನಲಾಗಿದೆ.

‘ಚಿರಾಗ್‌ರನ್ನು ನಮ್ಮ ಪಾಲುದಾರ ಎನ್ನಲ್ಲ. ಏಕೆಂದರೆ ಅವರಿಂದಲೇ ಬಿಹಾರದಲ್ಲಿ ಎನ್‌ಡಿಎಗೆ ಹಾನಿಯಾಗಿದೆ’ ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಕಿಡಿಕಾರಿದ್ದಾರೆ.

ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರ ನಾಯಕತ್ವ ವಿರೋಧಿಸಿ ಎಲ್‌ಜೆಪಿ ಪ್ರತ್ಯೇಕ ಸ್ಪರ್ಧೆ ಮಾಡಿತ್ತು. ಆದಾಗ್ಯೂ, ಇದೀಗ ಎನ್‌ಡಿಎ ಕೂಟದ ಸಭೆಗೆ ಆಹ್ವಾನಿಸಿರುವುದು ಮಹತ್ವ ಪಡೆದುಕೊಂಡಿದೆ.

2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಜೆಪಿ ಕೇವಲ ಒಂದು ಸೀಟನ್ನು ಮಾತ್ರವೇ ಪಡೆದಿತ್ತು. ಆದರೆ ಜೆಡಿಯು ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ತಡೆ ಹಾಕಿತ್ತು. ಇದರಿಂದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 71 ಸೀಟುಗಳನ್ನು ಗೆದ್ದಿದ್ದ ಜೆಡಿಯು 2020ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 43ಕ್ಕೆ ಕುಸಿದಿತ್ತು