Asianet Suvarna News Asianet Suvarna News

ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌: ಕಾಂಗ್ರೆಸ್‌ ನೀತಿ?

* ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ

* ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌: ಕಾಂಗ್ರೆಸ್‌ ನೀತಿ?

* 5 ವರ್ಷದ ಕಟ್ಟಾಳುಗಳಿಗೆ ವಿನಾಯ್ತಿ ಸಾಧ್ಯತೆ

 

Chintan Shivir Congress set for 1 family 1 ticket rule; waiver only if wards perform exceptionally for 5 years pod
Author
Bangalore, First Published May 14, 2022, 9:40 AM IST

ಉದಯಪುರ(ಮೇ.14): ಸತತ 2 ಲೋಕಸಭಾ ಸೋಲು, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸರಣಿ ಸೋಲಿನಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಪಕ್ಷ, ಶುಕ್ರವಾರದಿಂದ ಇಲ್ಲಿ ಆರಂಭವಾದ ಪಕ್ಷದ 3 ದಿನದ ಚಿಂತನ ಶಿಬಿರದಲ್ಲಿ ‘ಒಂದು ಕುಟುಂಬ, ಒಂದು ಟಿಕೆಟ್‌’, ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡುವ ವೇಳೆ ವಯೋಮಿತಿ ನಿಗದಿ, ಎಲ್ಲಾ ಹಂತದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಪಕ್ಷದಲ್ಲಿ ವಂಶಪಾರಂಪರ್ಯ ರಾಜಕೀಯ ನಡೆಸಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಪಕ್ಷ ಈ ಕ್ರಮ ಕೈಗೊಳ್ಳುತ್ತಿದೆ. ಆದರೆ ಪಕ್ಷದಲ್ಲಿ ಕನಿಷ್ಠ 5 ವರ್ಷ ಕಾಲ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ‘ಒಂದು ಕುಟುಂಬ, ಒಂದು ಟಿಕೆಟ್‌’ ನೀತಿಯಿಂದ ವಿನಾಯ್ತಿ ಸಿಗಲಿದ್ದು, ಇಂಥವರು ಒಂದೇ ಕುಟುಂಬದಲ್ಲಿದ್ದರೂ ಟಿಕೆಟ್‌ ಗಿಟ್ಟಿಸಬಹುದಾಗಿದೆ.

Ramya Politics ರಮ್ಯಾ ರಾಜಕೀಯ ರೀ-ಎಂಟ್ರಿ ಮುನ್ಸೂಚನೆ?

ಇದೇ ವೇಳೆ, 50-60 ವರ್ಷದಿಂದ ನಿಂತ ನೀರಾಗಿದ್ದ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಈಗಿರುವ ಬೂತ್‌ ಹಾಗೂ ಬ್ಲಾಕ್‌ ಮಟ್ಟದ ಸಮಿತಿಗಳ ಮಧ್ಯದಲ್ಲಿ ‘ಮಂಡಲ ಕಮಿಟಿ’ಗಳನ್ನು ರಚಿಸುವ ಪರಿಶೀಲನೆ ನಡೆದಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಮಿಟಿಗಳಲ್ಲಿ 50 ವರ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಪಕ್ಷದಲ್ಲಿ ಯಾವುದಾದರೂ ಸ್ಥಾನ ಬೇಕು ಎಂದರೆ ಪಕ್ಷದಲ್ಲಿ ಆತ ಕನಿಷ್ಠ 3ರಿಂದ 5 ವರ್ಷ ದುಡಿದಿರಬೇಕು. ಪಕ್ಷದಲ್ಲಿನ ಪದಾಧಿಕಾರಿಗಳ ಸಾಧನೆ ಅಳೆದು ಅವರಿಗೆ ಪದೋನ್ನತಿ ನೀಡಲು ‘ಮೌಲ್ಯಮಾಪನ ವಿಭಾಗ’ ಹಾಗೂ ಜನರ ನಾಡಿಮಿಡಿತ ಅರಿಯಲು ‘ಸಾರ್ವಜನಿಕ ದೂರದೃಷ್ಟಿವಿಭಾಗ’ ರಚನೆ ಮಾಡಬೇಕು ಎಂಬ ಪ್ರಸ್ತಾವಗಳೂ ಚಿಂತನ ಶಿಬಿರದಲ್ಲಿವೆ.

ಜೊತೆಗೆ ರಾಜ್ಯಸಭೆಗೆ ಗರಿಷ್ಠ 2-3 ಬಾರಿ ಮಾತ್ರ ಆಯ್ಕೆ ಮಾಡುವ ನಿಯಮ, ನಿಗದಿತ ವಯೋಮಿತಿ ಮೀರಿದವರನ್ನು ಪಕ್ಷದ ಯಾವುದೇ ಹುದ್ದೆಗಳಿಗೂ ನೇಮಕ ಮಾಡದೇ ಇರುವ, ಸಂಘಟನೆಯಲ್ಲಿನ ಎಲ್ಲಾ ಹಂತದ ಹುದ್ದೆಗಳಿಗೂ ವಿವಿಧ ವಯೋಮಿತಿ ನಿಗದಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಉದಾಹರಣೆಗೆ ಇದೀಗ ಬಿಜೆಪಿಯಲ್ಲಿ 70-75 ವರ್ಷದ ವಯೋಮಿತಿ ಹಾಕಲಾಗಿದೆ. ಕಾಂಗ್ರೆಸ್‌ನಲ್ಲೂ ಇಂಥದ್ದೇ ನೀತಿ ಜಾರಿಗೆ ಮುಂದಾಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌, ‘ಬದಲಾದ ಸಮಯದಲ್ಲಿ ಇಂಥ ದೊಡ್ಡ ಬದಲಾವಣೆ ಮಾಡಲು ಪಕ್ಷ ಮುಂದಾಗಿದೆ’ ಎಂದರು.

Anti Conversion Bill ಮತಾಂತರ ನಿಷೇಧ ಸುಗ್ರೀವಾಜ್ಞೆ ತಿರಸ್ಕಾರಕ್ಕೆ ಸಿದ್ದು ಆಗ್ರಹ!

ಮಂಡಲ ಸಮಿತಿ ಬಲ:

ಬೂತ್‌ ಹಾಗೂ ಬ್ಲಾಕ್‌ ಸಮಿತಿಗಳ ನಡುವೆ ‘ಮಂಡಲ ಸಮಿತಿ’ ರಚನೆ ಮಾಡುವ ಇರಾದ ಒಕ್ಷಕ್ಕಿದೆ. 15-20 ಬೂತ್‌ಗಳನ್ನು ಒಳಗೊಂಡು ಈ ಮಂಡಲ ಸಮಿತಿ ರಚನೆ ಆಗಲಿದೆ. 4 ಮಂಡಲ ಸೇರಿ ಒಂದು ಬ್ಲಾಕ್‌ ಕಾಂಗ್ರೆಸ್‌ ರಚನೆಯಾಗಲಿದೆ. ಇದರಿಂದ ತಳಮಟ್ಟದಲ್ಲಿ ಪಕ್ಷ ಮತ್ತಷ್ಟುಬಲಗೊಳ್ಳಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ ನಾಯಕರದ್ದು.

ಇನ್ನು ಒಂದು ಕುಟುಂಬ ಒಂದು ಟಿಕೆಟ್‌:

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಕನ್‌, ‘ಒಂದೇ ಕುಟುಂಬದವರಿಗೆ ಟಿಕೆಟ್‌ ನೀಡಿಕೆ ನೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪಕ್ಷಕ್ಕೆ ಕನಿಷ್ಠ 3ರಿಂದ 5 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಒಂದೇ ಕುಟುಂಬದವರಿದ್ದರೂ ಟಿಕೆಟ್‌ ನೀಡಲಾಗುತ್ತದೆ. ನಿನ್ನೆಯೋ ಮೊನ್ನೆಯೋ ಸೇರಿದ ಪ್ರಭಾವಿ ಕುಟುಂಬದವರಿಗೆ ಟಿಕೆಟ್‌ ನೀಡಬಾರದು ಎಂಬ ಇರಾದೆ ಇದೆ’ ಎಂದರು.

ಹೊಸ ಚಿಂತನೆಗಳು

- ಪಕ್ಷ ಸಂಘಟನೆಗೆ ಬಲ ನೀಡಲು ‘ಮಂಡಲ ಕಮಿಟಿ’ ರಚನೆ

- ಪಕ್ಷದಲ್ಲಿ ಹುದ್ದೆ ಗಿಟ್ಟಿಸಲು 5 ವರ್ಷ ದುಡಿಯುವುದು ಕಡ್ಡಾಯ

- ಪದಾಧಿಕಾರಿಗಳ ಸಾಧನೆ ಅರಿಯಲು ‘ಮೌಲ್ಯಮಾಪನ ವಿಭಾಗ’

- ರಾಜ್ಯಸಭೆಗೆ ಆಯ್ಕೆ ಮಾಡಲು ವಯೋಮಿತಿ ನಿಗದಿ ಸಾಧ್ಯತೆ

- ಯುವ ಮುಖಗಳಿಗೆ ಆದ್ಯತೆ ಮೂಲಕ ಹೊಸ ಲುಕ್‌ ನೀಡಲು ಒಲವು

Follow Us:
Download App:
  • android
  • ios