ನವದೆಹಲಿ(ಜು.19): ಗಡಿಯುದ್ದಕ್ಕೂ ಭಾರತೀಯ ಸೇನೆ ವಿರುದ್ಧ ಸದಾ ಕಾಲು ಕೆರೆದು ಜಗಳ ಕಾಯುವ ಚೀನಾ, ಇದೀಗ ವಿದೇಶದಲ್ಲಿರುವ ಭಾರತೀಯರು ಮತ್ತು ಭಾರತೀಯ ಯೋಜನಾ ಪ್ರದೇಶಗಳ ಮೇಲೆ ದಾಳಿ ನಡೆಸಲು ಮ್ಯಾನ್ಮಾರ್‌ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವಿಚಾರವನ್ನು ಭಾರತದ ಭದ್ರತಾ ಏಜೆನ್ಸಿಗಳು ಬಯಲು ಮಾಡಿವೆ.

ಇತ್ತೀಚೆಗಷ್ಟೇ ಮ್ಯಾನ್ಮಾರ್‌ -ಥಾಯ್ಲೆಂಡ್‌ ಗಡಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಇವುಗಳನ್ನು ಮ್ಯಾನ್ಮಾರ್‌ನಲ್ಲಿರುವ ಭಾರತೀಯರು, ಅವರ ಆಸ್ತಿ ಹಾಗೂ ಭಾರತದ ಆಗ್ನೇಯ ಏಷ್ಯಾಕ್ಕೆ ಸಂಪರ್ಕ ಕೊಂಡಿಯಾಗಲಿರುವ ಕಲಾದಾನ್‌ ಮಲ್ಟಿಮಾಡೆಲ್‌(ಹೆದ್ದಾರಿ) ಯೋಜನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಚೀನಾ ಪೂರೈಸಿರಬಹುದು ಎಂದು ಹೇಳಲಾಗಿದೆ.

ಕಲಾದಾನ್‌ ಯೋಜನೆ ಇರುವ ಪ್ರದೇಶ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮ್ಯಾನ್ಮಾರ್‌ನ ಬಂಡುಕೋರ ಸಂಘಟನೆ ಅರಾಕನ್‌ ಆರ್ಮಿ ಉಗ್ರ ನೆಲೆಗಳನ್ನು ಸ್ಥಾಪನೆ ಮಾಡಿದೆ. ಹೀಗಾಗಿ, ಅರಾಕನ್‌ ಆರ್ಮಿ ಹಾಗೂ ಬಂಡುಕೋರ ಸಂಘಟನೆಗಳಿಂದ ಕಲಾದಾನ್‌ ಯೋಜನೆ ರಕ್ಷಣೆಗಾಗಿ ಕಳೆದ ತಿಂಗಳಷ್ಟೇ ಭಾರತ ಮತ್ತು ಮಯಾನ್ಮಾರ್‌ ಸೇನಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಇದಾಗಿ ಕೆಲವೇ ದಿನಗಳಲ್ಲಿ ಮ್ಯಾನ್ಮಾರ್‌- ಥಾಯ್ಲೆಂಡ್‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಲೆ ಚೀನಾ ಸೇನೆಗೆ ಸೇರಿದ ಎಕೆ-47, ಗ್ರೆನೇಡ್‌ಗಳು, ಮಿಷಿನ್‌ ಗನ್‌ಗಳು ಸೇರಿದಂತೆ ಇನ್ನಿತರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಈ ಸಂಬಂಧ ಬಂಧನಕ್ಕೊಳಗಾದ 6 ಮಂದಿಯ ವಿಚಾರಣೆ ವೇಳೆ ಚೀನಾದ ಈ ಶಸ್ತ್ರಾಸ್ತ್ರಗಳು ಅರಾಕನ್‌ ಆರ್ಮಿಗೆ ರವಾನೆಯಾಗಿದೆ ಎಂದು ತಿಳಿದುಬಂದಿದೆ.