ನವದೆಹಲಿ(ಸೆ.27): ಪೂರ್ವ ಲಡಾಖ್‌ ಗಡಿಯಲ್ಲಿ ತೆಗೆವ ಎಲ್ಲ ತಂಟೆಗೆ ಭಾರತೀಯ ಯೋಧರು ನೀಡುತ್ತಿರುವ ತಕ್ಕ ತಿರುಗೇಟಿನಿಂದ ಬೆದರಿದಂತಿರುವ ಚೀನಾ ಇದೀಗ ಭಾರತದ ಮೇಲೆ ಪರೋಕ್ಷ ಯುದ್ಧ ಸಾರಿರುವಂತಿದೆ. ಜಮ್ಮು-ಕಾಶ್ಮೀರಕ್ಕೆ ಶಸ್ತಾ್ರಸ್ತ್ರ, ಸ್ಪೋಟಕಗಳನ್ನು ಭಾರಿ ಪ್ರಮಾಣದಲ್ಲಿ ಸಾಗಿಸುವಂತೆ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಚೀನಾ ಸೂಚನೆ ನೀಡಿದೆ. ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ಹಾಗೂ ಅಶಾಂತಿಯನ್ನು ಹೆಚ್ಚಿಸುವಂತೆಯೂ ತಾಕೀತು ಮಾಡಿದೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಭಾರತೀಯ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಅನೇಕ ಶಸ್ತಾ್ರಸ್ತ್ರಗಳನ್ನು ವಶಪಡಿಸಿಕೊಂಡಿವೆ. ಆ ಪೈಕಿ ಬಹುತೇಕ ಶಸ್ತಾ್ರಸ್ತ್ರಗಳು ಚೀನಾದಲ್ಲಿ ಉತ್ಪಾದನೆಯಾಗಿರುವುದಕ್ಕೆ ಗುರುತು ಸಿಕ್ಕಿದೆ. ಗುಪ್ತಚರ ಮಾಹಿತಿ ಇದಕ್ಕೆ ಪುಷ್ಟಿನೀಡುವಂತಿದೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ಪಾಕಿಸ್ತಾನದಿಂದ ಉಗ್ರರು ಒಳನುಸುಳುವುದನ್ನು ಹತ್ತಿಕ್ಕಲು ಒಳನುಸುಳುವಿಕೆ ನಿಗ್ರಹ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಹೊಂದಿವೆ. ಹೀಗಾಗಿ ಉಗ್ರರನ್ನೇ ಆಗಲಿ ಅಥವಾ ಶಸ್ತಾ್ರಸ್ತ್ರಗಳನ್ನೇ ಆಗಲಿ ಭಾರತಕ್ಕೆ ಸಾಗಿಸಿ ಹಿಂಸೆ ಹೆಚ್ಚಿಸುವುದು ಪಾಕಿಸ್ತಾನಕ್ಕೆ ಕಷ್ಟವಾಗುತ್ತಿದೆ. ಆದಾಗ್ಯೂ ಚಳಿಗಾಲ ಆರಂಭಕ್ಕೆ ಮುನ್ನ ಕಾಶ್ಮೀರಕ್ಕೆ ಶಸ್ತಾ್ರಸ್ತ್ರಗಳ ಪ್ರವಾಹವನ್ನೇ ಹರಿಸುವಂತೆ ಹಾಗೂ ಸಾಕಷ್ಟುಸಂಖ್ಯೆಯಲ್ಲಿ ಉಗ್ರರನ್ನು ರವಾನಿಸುವಂತೆ ಚೀನಾ ಕಾಲ ಮಿತಿ ನಿಗದಿಪಡಿಸಿದೆ. ಗಡಿಯಲ್ಲಿ ಬೆಳೆದಿರುವ ಪೊದೆಗಳು ಚಳಿಗಾಲದ ಸಂದರ್ಭದಲ್ಲಿ ಮಂಜು ಹಾಗೂ ಹಿಮಪಾತದಿಂದ ನಾಶವಾಗಿ ಹೋಗುತ್ತವೆ. ಆ ಸಂದರ್ಭದಲ್ಲಿ ಉಗ್ರರ ಒಳನುಸುಳುವಿಕೆ, ಶಸ್ತಾ್ರಸ್ತ್ರ ಸಾಗಣೆ ಕಷ್ಟ. ಹೀಗಾಗಿ ಚಳಿಗಾಲದ ಗಡುವನ್ನು ಚೀನಾ ನೀಡಿದೆ ಎಂದು ಮೂಲಗಳು ವಿವರಿಸಿವೆ.

ಗುಪ್ತಚರ ಮಾಹಿತಿ ಲಭ್ಯವಾದ ಬೆನ್ನಲ್ಲೇ ಭಾರತೀಯ ಭದ್ರತಾ ಪಡೆಗಳು ಒಳನುಸುಳುವಿಕೆ ನಿಗ್ರಹ ಜಾಲವನ್ನು ಮತ್ತಷ್ಟುಬಲಪಡಿಸಿವೆ. ಸೇನಾ ಮುಖ್ಯಸ್ಥ ಎಂ.ಎಂ. ನರವಣೆ, ಬಿಎಸ್‌ಎಫ್‌ ಮುಖ್ಯಸ್ಥ ರಾಕೇಶ್‌ ಆಸ್ಥಾನಾ, ಸಿಆರ್‌ಪಿಎಫ್‌ ಸಾರಥಿ ಎ.ಪಿ. ಮಹೇಶ್ವರಿ ಅವರು ಕಳೆದ 10 ದಿನಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದ್ದಾರೆ.

ಉಗ್ರರ ಒಳನುಸುಳುವಿಕೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕಳೆದ ಎರಡು ತಿಂಗಳಿನಿಂದ ಸ್ಥಳೀಯವಾಗಿಯೇ ಭಾರಿ ಸಂಖ್ಯೆಯ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಆದರೆ ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದು ಆ ದೇಶಕ್ಕೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ ಹಾಗೂ ಕ್ವಾಡ್‌ ಕಾಪ್ಟರ್‌ಗಳ ಮೂಲಕ ಶಸ್ತಾ್ರಸ್ತ್ರ ಸಾಗಣೆ ಪ್ರಯತ್ನ ತೀವ್ರಗೊಳಿಸಿದೆ. ಇದಕ್ಕಾಗಿ ಚೀನಾದಿಂದ ಸಾಕಷ್ಟುಹೆಕ್ಸಾಕಾಪ್ಟರ್‌ಗಳನ್ನು ಖರೀದಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.