ನವದೆಹಲಿ/ಬೀಜಿಂಗ್‌(ಜೂ.05): ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿದ್ದ ಭಾರತ- ಚೀನಾ ಗಡಿಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಉಭಯ ದೇಶಗಳ ನಡುವೆ ಶನಿವಾರ ಮಾತುಕತೆ ನಿಗದಿಯಾದ ಬೆನ್ನಲ್ಲೇ, ಲಡಾಖ್‌ನ ಗಲ್ವಾನ್‌ ಕಣಿವೆಯ ಗಡಿಯಿಂದ ಎರಡೂ ದೇಶಗಳ ಪಡೆಗಳು ದೂರ ಸರಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.

‘ಗಡಿಯಿಂದ ಚೀನಾ ಸೇನೆ 2 ಕಿ.ಮೀ. ದೂರ ಸರಿದಿದೆ. ಭಾರತ 1 ಕಿ.ಮೀ.ನಷ್ಟು ಗಡಿಯಿಂದ ಹಿಂದಡಿ ಇಟ್ಟಿದೆ’ ಎಂದು ಮಾಧ್ಯಮ ವರದಿಗಳು ಹೇಳಿವೆ. ಗಲ್ವಾನ್‌ ಕಣಿವೆಯಲ್ಲಿನ 3 ಭಾಗದಲ್ಲಿ ಭಾರತ-ಚೀನಾ ಸೇನೆ ಗಡುವೆ ಗಡಿ ವಿಚಾರವಾಗಿ ತಿಕ್ಕಾಟ ಇದೆ. ಆದರೆ ಇದೇ ವೇಳೆ ಪಾಂಗಾಂಗ್‌ ತ್ಸೋ ಸರೋವರ ಕೂಡ ತಿಕ್ಕಾಟದ ಕೇಂದ್ರವಾಗಿದ್ದು, ಇಲ್ಲಿಂದ ಉಭಯ ದೇಶಗಳ ಪಡೆಗಳು ಹಿಂದೆ ಸರಿದಿಲ್ಲ.

ಹೀಗಾಗಿ ಗಲ್ವಾನ್‌ ಬದಲು ಪಾಂಗಾಂಗ್‌ ತ್ಸೋ ಸರೋವರದ ಗಡಿ ವಿಷಯವು ಜೂನ್‌ 6ರಂದು ನಡೆಯಲಿರುವ ಉಭಯ ದೇಶಗಳ ‘ಲೆಫ್ಟಿನೆಂಟ್‌ ಜನರಲ್‌’ ಮಟ್ಟದ ಮಾತುಕತೆ ವೇಳೆ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಭಾರತದ ಪರ ‘14 ಕೋರ್‌’ ಪಡೆಯ ಮುಖ್ಯಸ್ಥ ಲೆ. ಜನರಲ್ ಹರಿಂದರ್‌ ಸಿಂಗ್‌ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಗಡಿ ಬಿಕ್ಕಟ್ಟಿನ ನಡುವೆಯೇ ಚೀನಾದ ಹೊಸ ನಡೆ!

ಈ ಸಭೆಗೆ ಭಾರತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಚೀನಾ ಸೇನೆಯು ಪೂರ್ವ ಲಡಾಖ್‌ನಲ್ಲಿ ನಡೆಸುತ್ತಿರುವ ಚಟುವಟಿಕೆ ಬಗ್ಗೆ ಭದ್ರತಾ ಪಡೆಗಳು ಸೇನೆಗೆ ವರದಿ ಸಲ್ಲಿಸಿವೆ. ಹೇಗೆ ಚೀನಾ ಪಡೆ ತನ್ನ ಬಲ ವೃದ್ಧಿಸಿಕೊಂಡಿದೆ ಎಂಬ ಬಗ್ಗೆ ವರದಿಯಲ್ಲಿ ಮಾಹಿತಿ ಇರಲಿದೆ.