ನವದೆಹಲಿ(ಸೆ.13): ಪೂರ್ವ ಲಡಾಖ್‌ನ ಆಯಕಟ್ಟಿನ ಪ್ರದೇಶಗಳನ್ನು ಭಾರತೀಯ ಯೋಧರು ವಶಪಡಿಸಿಕೊಂಡ ಬೆನ್ನಲ್ಲೇ, ಚೀನಾ ಯೋಧರು ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪ್ಯಾಂಗಾಂಗ್‌ ಸರೋವರ ಪ್ರದೇಶಗಳ ವಶ ಪ್ರಯತ್ನ ವಿಫಲಗೊಂಡ ಬೆನ್ನಲ್ಲೇ ಅದರ ಸಮೀಪದಲ್ಲೇ ಇರುವ ಸ್ಪಾಂಗ್ಗೂರ್‌ ಕಣಿವೆ ಪ್ರದೇಶದ ಬಳಿ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜಿಸಿರುವ ವಿಷಯ ಬೆಳಕಿಗೆ ಬಂದಿದೆ.

ಪ್ಯಾಂಗಾಂಗ್‌ ಸರೋವರದ ದಕ್ಷಿಣಕ್ಕಿರುವ ಪ್ರದೇಶದಲ್ಲಿ ಚೀನಾ ಸಾವಿರಾರು ಯೋಧರು, ಟ್ಯಾಂಕರ್‌ಗಳು, ಹೌವಿಟ್ಜರ್‌ ಗನ್‌ಗಳನ್ನು ನಿಯೋಜಿಸಿದೆ. ಇವೆಲ್ಲಾ ಭಾರತೀಯ ಸೇನೆ ನಿಯೋಜನೆ ಸ್ಥಳದ ಫೈರಿಂಗ್‌ ರೇಂಜ್‌ನಲ್ಲೇ ಇದೆ ಎಂದು ಮೂಲಗಳು ತಿಳಿಸಿವೆ. ಈ ಸುಳಿವು ಸಿಕ್ಕ ಬೆನ್ನಲ್ಲೇ ಭಾರತ ಕೂಡಾ ಚೀನಾಕ್ಕೆ ಸಮನಾದ ಪ್ರಮಾಣದಲ್ಲಿ ತಾನೂ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಇಲ್ಲಿಗೆ ಚೀನಾ ತನ್ನ ವಿಶೇಷ ಪಡೆಯೊಂದನ್ನು ನಿಯೋಜಿಸಿದೆ. ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಮಾತ್ರ ನಿಯೋಜಿಸುವ ಈ ಪಡೆಯಲ್ಲಿ ಚೀನಾ ಯೋಧರ ಜೊತೆಗೆ ಸ್ಥಳೀಯ ಬಾಕ್ಸರ್‌ಗಳು, ಕ್ಲಬ್‌ಫೈಟರ್‌ಗಳು ಕೂಡಾ ಇರುತ್ತಾರೆ. ಚೀನಾ ಸೇನೆಯ ಮೀಸಲು ವಿಭಾಗಕ್ಕೆ ಸೇರಿದ ಇವರೆಲ್ಲಾ ಸ್ಥಳೀಯರೇ ಆಗಿರುತ್ತಾರೆ.