ವಾಷಿಂಗ್ಟನ್‌(ಜೂ.24): ಲಡಾಖ್‌ ಗಡಿಯಲ್ಲಿ ಭಾರತ- ಚೀನಾ ಯೋಧರ ನಡುವೆ ಜೂ.15ರಂದು ನಡೆದ ಸಂಘರ್ಷ ಆ ಕ್ಷಣಕ್ಕೆ ನಡೆದ ಘಟನೆ ಅಲ್ಲ. ಭಾರತೀಯ ಯೋಧರ ಮೇಲೆ ಚೀನಾ ಉದ್ದೇಶಪೂರ್ವಕವಾಗಿ ದಾಳಿ ಮಾಡಿಸಿತ್ತು. ಭಾರತೀಯರ ಮೇಲೆ ಎರಗುವಂತೆ ಸೈನಿಕರಿಗೆ ಚೀನಾ ಸೇನಾಪಡೆಯ ಜನರಲ್‌ ಝಾವೋ ಝಾನ್‌ಖಿ ಅವರೇ ಸೂಚಿಸಿದ್ದರು ಎಂದು ಅಮೆರಿಕ ಗುಪ್ತಚರ ವರದಿ ಹೇಳಿದೆ.

ಜ| ಝಾವೋ ಅವರು ಪಶ್ಚಿಮ ಕಮಾಂಡ್‌ ಮುಖ್ಯಸ್ಥರಾಗಿದ್ದಾರೆ. ಚೀನಾ ಯಾವತ್ತೂ ದುರ್ಬಲ ಎಂದು ತೋರ್ಪಡಿಸಿಕೊಳ್ಳಬಾರದು. ಹೀಗೆ ತೋರ್ಪಡಿಸಿದರೆ ಅದನ್ನು ಅಮೆರಿಕ ಹಾಗೂ ಭಾರತ ಬಳಸಿಕೊಂಡು ಪ್ರಾಬಲ್ಯ ಮೆರೆಯುತ್ತವೆ. ಹೀಗಾಗಿ ಭಾರತಕ್ಕೆ ಪಾಠ ಕಲಿಸಬೇಕು ಎಂಬ ನಿಲುವನ್ನು ಹೊಂದಿದವರು ಝಾವೋ ಅವರು. ಇದಕ್ಕೆ ಅನುಗುಣವಾಗಿ ಭಾರತಕ್ಕೆ ‘ಪಾಠ ಕಲಿಸಲೆಂದೇ’ ಕಳೆದ ವಾರ ತಮ್ಮ ಯೋಧರಿಗೆ ಸೂಚನೆ ನೀಡಿದ್ದರು. ಆ ಪ್ರಕಾರ ಭಾರತದ ಯೋಧ ಜತೆ ಚೀನಾ ಯೋಧರು ಮುಷ್ಠಿ ಯುದ್ಧ ನಡೆಸಿದರು ಎಂದು ಗುಪ್ತಚರ ವರದಿಯಲ್ಲಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದರು. ಚೀನಾಗೆ ದಾಳಿಯ ಈ ತಂತ್ರ ಮುಳುವಾಗಿದೆ. ಏಕೆಂದರೆ, ಟಿಕ್‌ಟಾಕ್‌ನಂತಹ ಚೀನಿ ಆ್ಯಪ್‌ಗಳು ಹಾಗೂ ಮೊಬೈಲ್‌ಗಳನ್ನು ಭಾರತೀಯರು ತಿರಸ್ಕರಿಸುತ್ತಿದ್ದಾರೆ. ಇದರಿಂದಾಗಿ ಚೀನಾ ಸೇನೆಗೆ ಈ ದಾಳಿಯಿಂದ ಜಯ ಸಿಕ್ಕಿಲ್ಲ ಎಂದು ವರದಿ ವಿಶ್ಲೇಷಿಸಿದೆ.