ನವದೆಹಲಿ(ಡಿ.19): ಪೂರ್ವ ಲಡಾಖ್‌ನಲ್ಲಿ ಸೃಷ್ಟಿಯಾಗಿರುವ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳುತ್ತಲೇ ಬಂದಿರುವ ಚೀನಾ, ಇದೀಗ ಗಡಿಯಲ್ಲಿ ಸದ್ದಿಲ್ಲದೆ ಬಲ ವೃದ್ಧಿಪಡಿಸಿಕೊಳ್ಳಲು ಯತ್ನಿಸುವ ಮೂಲಕ ಮತ್ತೊಮ್ಮೆ ತನ್ನ ಕುತಂತ್ರ ಬುದ್ಧಿಯನ್ನು ತೋರಿದೆ. ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಕಾರಕೋರಂ ಪಾಸ್‌ ಹಾಗೂ ಅಕ್ಸಾಯ್‌ ಚಿನ್‌ ಪ್ರದೇಶಗಳಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಚೀನಾ ಸದ್ದಿಲ್ಲದೆ ಕೈಗೆತ್ತಿಕೊಂಡಿರುವುದು ಬೆಳಕಿಗೆ ಬಂದಿದೆ.

ಚೀನಾ ಈಗಾಗಲೇ 8ರಿಂದ 10 ಮೀಟರ್‌ ಅಗಲದ ಪರಾರ‍ಯಯ ರಸ್ತೆಯೊಂದನ್ನು ಕಾರಕೋರಂ ಪಾಸ್‌ಗೆ ನಿರ್ಮಾಣ ಮಾಡಿದೆ. ಇದರಿಂದ ದೌಲತ್‌ ಬೇಗ್‌ ಓಲ್ಡಿ ವಲಯದ ಪ್ರಯಾಣ ಅವಧಿ ಎರಡು ತಾಸುಗಳಷ್ಟುಕಡಿಮೆಯಾಗಲಿದೆ. ಮತ್ತೊಂದೆಡೆ ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಕಚ್ಚಾ ರಸ್ತೆಗಳಿಗೆ ಡಾಂಬರ್‌ ಹಾಕಿದೆ. ದೊಡ್ಡ ದೊಡ್ಡ ವಾಹನಗಳ ಸಾಗಣೆಗೆ ಅನುಕೂಲವಾಗುವಂತೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ ಎಂದು ಹಿರಿಯ ಮಿಲಿಟರಿ ಕಮಾಂಡರ್‌ವೊಬ್ಬರು ಮಾಹಿತಿ ನೀಡಿದ್ದಾರೆ.

ಗೋಲ್ಮಡ್‌ನಲ್ಲಿ ಭೂಗತ ಪೆಟ್ರೋಲಿಯಂ ಹಾಗೂ ತೈಲ ಸಂಂಗ್ರಹಾಗಾರಗಳನ್ನು ಒಳಗೊಂಡ ಹೊಸ ಸರಕು ಸಾಗಣೆ ಡಿಪೋವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಡಿಪೋ ನೈಜ ಗಡಿ ನಿಯಂತ್ರಣ ರೇಖೆಯಿಂದ 1000 ಕಿ.ಮೀ. ದೂರದಲ್ಲಿದೆ. ಆದರೆ ಟಿಬೆಟ್‌ ರೈಲ್ವೆ ಮೂಲಕ ಲಾಸಾಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಪರಿಸ್ಥಿತಿ ಬಿಗಡಾಯಿಸಿದಾಗ ಇದು ಚೀನಾ ನೆರವಿಗೆ ಬರಲಿದೆ ಎಂದು ಹೇಳಲಾಗಿದೆ