ಬೀಜಿಂಗ್‌(ಏ.12): ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಿಂದ ಭಾರತ ಮತ್ತು ಚೀನಾ ತಮ್ಮ ತಮ್ಮ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಸಂಬಂಧ ಉಭಯ ದೇಶಗಳ ಸೇನಾಪಡೆಗಳ ನಡುವೆ ಇತ್ತೀಚೆಗೆ ನಡೆದ 11ನೇ ಸುತ್ತಿನ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿಯೇನೂ ಕಂಡುಬಂದಿಲ್ಲ. ಶುಕ್ರವಾರ ಸತತ 13 ತಾಸು ನಡೆದ ಮಾತುಕತೆಯ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಭಾರತೀಯ ಸೇನೆ, ‘ಈಗಲೂ ಯೋಧರ ಉಪಸ್ಥಿತಿಯಿರುವ ಹಾಟ್‌ ಸ್ಟ್ರಿಂಗ್‌, ಗೋಗ್ರಾ ಹಾಗೂ ದೆಪ್ಸಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಂಡು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಹಾಗೂ ಬಾಕಿಯಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹೇಳಿದೆ.

ಇದಕ್ಕೆ ಪ್ರತಿಯಾಗಿ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ಸೇನೆ, ‘ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಈಗಿನ ಪ್ರಕ್ರಿಯೆ ಮುಂದುವರೆಯುವಂತೆ ಭಾರತ ನೋಡಿಕೊಳ್ಳಬೇಕು ಹಾಗೂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಣ್ಣಗಾಗುವಂತೆ ಮಾಡಬೇಕು’ ಎಂದು ಭಾರತದ ಮೇಲೇ ಜವಾಬ್ದಾರಿ ಹೊರಿಸಿದೆ. ಅಂದರೆ, ಇನ್ನುಮುಂದೆ ಭಾರತವೇ ಮೊದಲು ತನ್ನ ಸೇನೆ ಹಿಂದಕ್ಕೆ ಕರೆಸಿಕೊಳ್ಳಲಿ ಎಂಬರ್ಥದಲ್ಲಿ ಚೀನಾ ಮಾತನಾಡಿದೆ.

ಶುಕ್ರವಾರದ ಸಭೆಯಲ್ಲಿ ಉಪಸ್ಥಿತರಿದ್ದ ಮೂಲಗಳು, ‘ಚೀನಾದ ಅಧಿಕಾರಿಗಳು ‘ಪೂರ್ವನಿರ್ಧರಿತ ಮನಸ್ಥಿತಿ’ಯಿಂದ ಸಭೆಗೆ ಬಂದಿದ್ದರು. ಇನ್ನಷ್ಟುಸೇನೆ ಹಿಂಪಡೆತದ ಬಗ್ಗೆ ಯಾವುದೇ ಒಲವು ತೋರಲಿಲ್ಲ’ ಎಂದು ತಿಳಿಸಿವೆ. ಹೀಗಾಗಿ ಪ್ಯಾಂಗಾಂಗ್‌ ಸರೋವರದ ದಂಡೆಯಿಂದ ಸೇನಾಪಡೆಗಳು ಹಿಂದಕ್ಕೆ ಸರಿದರೂ ಇನ್ನುಳಿದ ಗಡಿಯಲ್ಲಿ ಈಗಲೂ ಘರ್ಷಣೆಗೆ ಅವಕಾಶಗಳು ಹಾಗೇ ಉಳಿದಂತಾಗಿದೆ.