ನಮ್ಮ ಸೈನಿಕನನ್ನು ಬೇಗ ವಾಪಸ್ ಕಳಿಸಿ: ಭಾರತಕ್ಕೆ ಚೀನಾದಿಂದ ತಾಕೀತು| ನಮ್ಮ ಭೂಭಾಗದಲ್ಲೇ ನಾಪತ್ತೆ: ಹೊಸ ವರಸೆ
ಬೀಜಿಂಗ್*(ಡಿ.11): ತ್ವೇಷಮಯ ಪರಿಸ್ಥಿತಿ ಮುಂದುವರಿದಿರುವ ಪೂರ್ವ ಲಡಾಖ್‌ನ ಪ್ಯಾಂಗೋಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಾ ಯೋಧನನ್ನು ಭಾರತೀಯ ಸೇನಾ ಪಡೆಗಳು ಸೆರೆ ಹಿಡಿದ ಬೆನ್ನಲ್ಲೇ, ಆತನನ್ನು ಬೇಗ ವಾಪಸ್ ಕಳುಹಿಸುವಂತೆ ಭಾರತಕ್ಕೆ ಚೀನಾ ತಾಕೀತು ಮಾಡಿದೆ. ಅಲ್ಲದೆ ತನ್ನ ಯೋಧ ನುಸುಳಿಲ್ಲ, ಆತ ತನ್ನ ಭೂಭಾಗದಿಂದ ನಾಪತ್ತೆಯಾಗಿದ್ದಾನೆ ಎಂದು ಹೊಸ ವರಸೆ ತೆಗೆದಿದೆ.
ಶುಕ್ರವಾರ ಸೈನಿಕ ನಾಪತ್ತೆಯಾಗಿದ್ದ. ಈ ವಿಚಾರವನ್ನು ಚೀನಾದ ಯೋಧರು ಭಾರತದ ಗಮನಕ್ಕೆ ತಂದರು. ಆದರೆ ಆತ ತನ್ನ ಬದಿಯಲ್ಲಿ ಪತ್ತೆಯಾಗಿದ್ದಾನೆ, ಹಿರಿಯ ಅಧಿಕಾರಿಗಳಿಂದ ಸೂಚನೆ ಸಿಕ್ಕ ಬಳಿಕ ಹಸ್ತಾಂತರ ಮಾಡುತ್ತೇವೆ ಎಂದು ಭಾರತೀಯ ಯೋಧರು ಹೇಳುತ್ತಿದ್ದಾರೆ ಎಂದು ಚೀನಾ ಮಿಲಿಟಿರಿಯ ಅಧಿಕೃತ ವೆಬ್‌ಸೈಟ್ ಆಗಿರುವ ‘ದ ಚೀನಾ ಮಿಲಿಟರಿ ಆನ್‌ಲೈನ್’ ಹೇಳಿಕೊಂಡಿದೆ.
ಭಾರತೀಯ ಅಧಿಕಾರಿಗಳು ಈ ಕೂಡಲೇ ಯೋಧನನ್ನು ತವರಿಗೆ ವಾಪಸ್ ಕಳುಹಿಸಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಸಂಯುಕ್ತವಾಗಿ ನಿರ್ವಹಿಸಬೇಕು ಎಂಬ ಉಪದೇಶವನ್ನು ಕೂಡ ನೀಡಿದೆ.
