ಮಹಾಕುಂಭದಲ್ಲಿ ವೃದ್ಧ ದಂಪತಿಯನ್ನು ಮಕ್ಕಳು ಕೈಬಿಟ್ಟ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ವೃದ್ಧ ದಂಪತಿಯನ್ನು ಆಶ್ರಮಕ್ಕೆ ಸೇರಿಸುವುದಾಗಿ ವ್ಯಕ್ತಿಯೊಬ್ಬರು ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಕ್ಕಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಭಾಗಿಯಾಗಲು ದೇಶದ ಮೂಲೆ ಮೂಲೆಗಳಿಂದ ಜನರು ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಮಹಾಕುಂಭ ಮೇಳದ ಫೋಟೋ ಮತ್ತು ವಿಡಿಯೋಗಳು ಕಣ್ಮುಂದೆ ಬರುತ್ತಿವೆ. ಇದೀಗ ಇದೇ ಕುಂಭಮೇಳದ ಜನಸಾಗರದಲ್ಲಿ ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಬಿಟ್ಟು ಹೋಗಿದ್ದಾರೆ. ವೃದ್ಧ ಪೋಷಕರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ, ವೃದ್ಧ ದಂಪತಿಗೆ ಹಣ ಸಹಾಯ ಮಾಡುತ್ತಿರೋದನ್ನು ಗಮನಿಸಬಹುದು. ತಮ್ಮ ಮಕ್ಕಳು ಈ ರೀತಿಯಾಗಿ ನಮ್ಮನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ ಎಂದು ವೃದ್ಧ ಹೇಳುತ್ತಿರೋದನ್ನು ನೋಡಬಹುದು. ಗಂಡನ ಮಾತು ಕೇಳಿ ಹೆಂಡತಿ ಕಣ್ಣುಗಳನ್ನು ತುಂಬಿಕೊಂಡು ಕಣ್ಣೀರು ಹಾಕಿದ್ದಾರೆ. ವಿಡಿಯೋ ಮಾಡಿರುವ ವ್ಯಕ್ತಿ, ನಿಮ್ಮಿಬ್ಬರನ್ನು ವೃದ್ಧಾಶ್ರಮಕ್ಕೆ ಸೇರಿಸುವೆ ಎಂದು ಭರವಸೆ ನೀಡಿದ್ದಾನೆ. ವೃದ್ಧ ದಂಪತಿ ಸಹ ಆಶ್ರಮಕ್ಕೆ ಹೋಗಲು ಒಪ್ಪಿಕೊಂಡಿದ್ದಾರೆ.

ವಿಡಿಯೋದಲ್ಲಿ ವೃದ್ಧ ದಂಪತಿಗೆ ಒಂದಿಷ್ಟ ಹಣ ನೀಡಿದ್ದಾನೆ. ನಾನು ಇಲ್ಲಿಂದ 4 ಕಿಮೀ ದೂರದಲ್ಲಿರುತ್ತೇನೆ. ಬೇಕಿದ್ರೆ ಈಗಲೇ ನನ್ನೊಂದಿಗೆ ಬರಬಹುದು. ಸದ್ಯಕ್ಕೆ ನನ್ನ ಬಳಿಯಲ್ಲಿರೋ ಹಣ ಇಷ್ಟೆ. ಈ ಹಣ ಇರಿಸಿಕೊಳ್ಳಿ. ಬೆಳಗ್ಗೆ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ವ್ಯಕ್ತಿ ತಿಳಿಸಿದ್ದಾನೆ. ಆಗ ವೃದ್ಧ, ನಾವಿಬ್ಬರು ಬೆಳಗ್ಗೆಯವರೆಗೂ ಇಲ್ಲಿಯೇ ಇರುತ್ತೇವೆ. ಸೊಸೆಯರು ತುಂಬಾ ಕಿರುಕುಳ ನೀಡುತ್ತಾರೆ. ಮೂವರು ಸೊಸೆಯರು ತುಂಬಾ ದುಷ್ಟರು ಎಂದು ವೃದ್ಧ ಆಕ್ರೋಶ ಹಾಕಿದ್ದಾರೆ. ಗಂಡನ ಮಾತು ಕೇಳಿ ವೃದ್ಧ ತಾಯಿ ಕಣ್ಣೀರಿಟ್ಟಿದ್ದಾರೆ. 

ಇದನ್ನೂ ಓದಿ: ಕುಂಭ ಮೇಳದಲ್ಲಿ ಮೊನಾಲಿಸಾ ಪ್ರಸಿದ್ಧಿಗೆ ಜಾತಕದ ಈ ಗ್ರಹ ಕಾರಣ

ವೈರಲ್ ಆಗಿರುವ ವಿಡಿಯೋವನ್ನು ಶಿವಂ ಬಿಕಾನೇರಿ (shivam_bikaneri_official) ಎಂಬ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ 1.6 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, 1 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಓ ದೇವರೇ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ. ಈ ವೃದ್ಧರ ಕಷ್ಟ ನೋಡಲು ಆಗುತ್ತಿಲ್ಲ. ಆ ಪಾಪಿ ಮಕ್ಕಳು ಯಾರೆಂದು ಕಂಡು ಹಿಡಿದು ಛೀಮಾರಿ ಹಾಕಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆ ವೃದ್ಧರಿಗೆ ಊಟಕ್ಕಾಗಿ ಹಣ ನೀಡಿರೋದು ತುಂಬಾ ಸಂತೋಷ. ನಿಮ್ಮ ಲೈಕ್ಸ್ ಮತ್ತು ವ್ಯೂವ್‌ ಗಾಗಿ ಅವರಿಬ್ಬರ ವಿಡಿಯೋ ಮಾಡಿಕೊಂಡು ಅಲ್ಲಿಯೇ ಅದೇ ಸ್ಥಿತಿಯಲ್ಲಿ ಬಿಟ್ಟು ಬಂದಿರೋದು ತಪ್ಪು ಎಂದು ವ್ಲಾಗರ್ ಶಿವಂ ಬಿಕಾನೇರಿ ಅವರನ್ನು ಸಹ ಕೆಲ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ: ಮಹಾಕುಂಭ ಮೇಳದ ನಾರಿ ಕುಂಭದಲ್ಲಿ 2000ಕ್ಕೂ ಹೆಚ್ಚು ಮಹಿಳೆಯರು ಭಾಗಿ

View post on Instagram