ಅಹಮದಾಬಾದ್‌[ಫೆ.05]: ಬಿಡದಿಯಲ್ಲಿ ಆಶ್ರಮ ಹೊಂದಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದನ ಆಶ್ರಮದಿಂದಲೇ ತನ್ನ ಇಬ್ಬರು ಹೆಣ್ಣು ಮಕ್ಕಳು ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಬೇಕು ಎಂದು ಕೋರಿದ್ದ ಜನಾರ್ಧನ ಶರ್ಮಾ ಇದೀಗ, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ.

ನಿತ್ಯಾನಂದ ಆಶ್ರಮದಿಂದ ಕಾಣೆಯಾದ ಲೋಪಮುದ್ರ ಶರ್ಮಾ(21) ಹಾಗೂ ನಂದಿತಾ ಶರ್ಮಾ(18) ತಂದೆ ಜನಾರ್ದನ ಶರ್ಮಾ ಅವರು ಈ ಸಂಬಂಧ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಈ ಕುರಿತಾದ ಅರ್ಜಿಯನ್ನು ಗುಜರಾತ್‌ ಉಚ್ಚ ನ್ಯಾಯಾಲಯ ಮುಂದಿನ ವಾರ ವಿಚಾರಣೆ ಕೈಗೊಳ್ಳುವ ಸಾಧ್ಯತೆಯಿದೆ.

ಕಾಣೆಯಾದ ತಮ್ಮ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪ್ರಮುಖ ಆರೋಪಿ ನಿತ್ಯಾನಂದ ಭಾರತದಲ್ಲೇ ಇಲ್ಲ. ಹೀಗಾಗಿ, ಅವರ ಪತ್ತೆ ಸ್ಥಳೀಯ ಪೊಲೀಸರಿಗೆ ದುಸ್ತರವಾಗುವ ಸಾಧ್ಯತೆಯಿದೆ. ಹೀಗಾಗಿ, ಇಂಟರ್‌ಪೋಲ್‌ ಜೊತೆ ಸಹಕಾರ ಸಾಧಿಸುವ ಸಿಬಿಐಗೆ ಈ ಪ್ರಕರಣದ ತನಿಖೆಯನ್ನು ವಹಿಸಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.