ನವದೆಹಲಿ[ಫೆ.12]: ಅರವಿಂದ ಕೇಜ್ರಿವಾಲ್‌. ಐಐಟಿ ಪದವೀಧರ, ಎಂಜಿನಿಯರ್‌, ಕಂದಾಯ ಅಧಿಕಾರಿ, ದಿಲ್ಲಿಯ ಸಾಮಾನ್ಯ ಮನುಷ್ಯ.. ಇಷ್ಟೊಂದು ಬಿರುದಾವಳಿ ಹೊಂದಿದ್ದ ಇವರು ಈಗ 3ನೇ ಬಾರಿ ದಿಲ್ಲಿ ಮುಖ್ಯಮಂತ್ರಿ ಪಟ್ಟಅಲಂಕರಿಸುತ್ತಿದ್ದಾರೆ.

ಕೇಜ್ರಿವಾಲ್‌ 9 ವರ್ಷದ ಹಿಂದೆ ಅಣ್ಣಾ ಹಜಾರೆ ಅವರ ಲೋಕಪಾಲ ಆಂದೋಲನಕ್ಕೆ ಧುಮುಕಿದರು. ಆಗ ಅವರು ರಾಜಕೀಯ ಚೌಕಟ್ಟು ಪ್ರವೇಶಿಸಿದರು. ಅಣ್ಣಾ ಹಜಾರೆ ಹೋರಾಟದ 1 ವರ್ಷ ಬಳಿಕ, ಅಂದರೆ 2012ರಲ್ಲಿ ಆಮ್‌ ಆದ್ಮಿ ಪಕ್ಷ (ಆಪ್‌) ಸ್ಥಾಪನೆಯ ಘೋಷಣೆ ಮಾಡಿದರು. ದಿಲ್ಲಿಯ ಕೊರೆಯುವ ಚಳಿಯಲ್ಲಿ ‘ಮಫ್ಲರ್‌’ ಸುತ್ತಿಕೊಂಡೇ ಪ್ರಚಾರ ನಡೆಸಿ ‘ಮಫ್ಲರ್‌’ ಮ್ಯಾನ್‌ ಎನ್ನಿಸಿಕೊಂಡರು.

2013ರಲ್ಲಿ ಆಪ್‌ ತನ್ನ ಮೊದಲ ಚುನಾವಣೆಯಲ್ಲೇ ಉತ್ತಮ ಸಾಧನೆ ತೋರಿತು. ಬಹುಮತ ಬಾರದೇ ಹೋದರೂ ಹೆಚ್ಚು ಸ್ಥಾನ ಗಳಿಸಿತು. ಆಗ ಕಾಂಗ್ರೆಸ್‌ ಬಾಹ್ಯ ಬೆಂಬಲದೊಂದಿಗೆ ಅವರು ಅಧಿಕಾರಕ್ಕೆ ಬಂದರು. ಆದರೆ ಕೇವಲ 49 ದಿನಗಳಲ್ಲಿ ರಾಜೀನಾಮೆ ನೀಡಿದರು. ಸಿಎಂ ಆದರೂ ತಮ್ಮ ‘ವ್ಯಾಗನಾರ್‌’ ಕಾರಿನಲ್ಲೇ ಸಂಚರಿಸಿ ಗಮನ ಸೆಳೆಯುತ್ತಿದ್ದರು. ನಂತರ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಲು ಯತ್ನಿಸಿ ವಾರಾಣಸಿಯಲ್ಲಿ 2014ರಲ್ಲಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಸೋತರು. 2015ರಲ್ಲಿ ಕೇಜ್ರಿವಾಲ್‌ ಅದೃಷ್ಟಮತ್ತೆ ಖುಲಾಯಿಸಿತು. ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67ರಲ್ಲಿ ಆಪ್‌ ಅಭೂತಪೂರ್ವ ಗೆಲುವು ಕಂಡಿತು. ಮತ್ತೆ ಕೇಜ್ರಿವಾಲ್‌ ಸಿಎಂ ಆಗಿ 5 ವರ್ಷ ಅಧಿಕಾರ ನಡೆಸಿದರು.

ಆರಂಭಿಕ ಜೀವನ:

ಕೇಜ್ರಿವಾಲ್‌ ಮೂಲತಃ ಹರ್ಯಾಣದವರು. 1968ರ ಆಗಸ್ಟ್‌ 16ರಂದು ಅವರು ಗೋವಿಂದರಾಂ ಕೇಜ್ರಿವಾಲ್‌, ಗೀತಾದೇವಿ ಪುತ್ರನಾಗಿ ಜನಿಸಿದರು. ಐಐಟಿ ಖರಗಪುರದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪೂರೈಸಿದ ಕೇಜ್ರಿವಾಲ್‌, 1989ರಲ್ಲಿ ಟಾಟಾ ಸ್ಟೀಲ್‌ ಕಂಪನಿ ಸೇರಿ 3 ವರ್ಷ ಕೆಲಸ ಮಾಡಿದರು. ಬಳಿಕ 1992ರಲ್ಲಿ ರಾಜೀನಾಮೆ ನೀಡಿ ಯುಪಿಎಸ್‌ಸಿ ಪರೀಕ್ಷೆ ಬರೆದು ಐಆರ್‌ಎಸ್‌ ಅಧಿಕಾರಿಯಾದರು. ಅನೇಕ ಎನ್‌ಜಿಒ, ಸಂಘ-ಸಂಸ್ಥೆಗಳ ಜತೆಗೆ ಗುರುತಿಸಿಕೊಂಡರು.

ಈ ನಡುವೆ, 2006ರಲ್ಲಿ ಆದಾಯ ತೆರಿಗೆ ಜಂಟಿ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ‘ಪಬ್ಲಿಕ್‌ ಕಾಸ್‌ ರೀಸಚ್‌ರ್‍ ಫೌಂಡೇಶನ್‌’ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿ ಸಮಾಜ ಸೇವೆ ಆರಂಭಿಸಿದರು. ಆರ್‌ಟಿಐ ಕಾರ್ಯಕರ್ತನಾಗಿದ್ದ ಅವರಿಗೆ 2006ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಹುಡುಕಿಕೊಂಡು ಬಂತು. ನಂತರ ಅವರು ಲೋಕಪಾಲ ಹೋರಾಟಕ್ಕೆ ಧುಮುಕಿ ರಾಜಕಾರಣಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಫ್ಯಾಮಿಲಿ ಮ್ಯಾನ್‌, ಸಸ್ಯಾಹಾರಿ:

ಕೇಜ್ರಿವಾಲ್‌ ಅವರು ಪಕ್ಕಾ ಸಸ್ಯಾಹಾರಿ. ಮನೆ ಊಟವೇ ಇವರಿಗೆ ಬೇಕು. ಸುನಿತಾ ಎಂಬ ತಮ್ಮದೇ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಣಿಯನ್ನು ಮದುವೆಯಾಗಿದ್ದಾರೆ. ಹರ್ಷಿತಾ ಮತ್ತು ಪುಳಕಿತ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರೂ ಐಐಟಿಯಲ್ಲಿ ಓದಿದ್ದಾರೆ. ತಂದೆ-ತಾಯಿ, ಪತ್ನಿ, ಮಕ್ಕಳ ಜತೆ ಸುಖೀ ಸಂಸಾರ ನಡೆಸುತ್ತಿದ್ದಾರೆ.