ಛತ್ತೀಸ್‌ಘಡ್[ಡಿ.15]: ಸೋಶಿಯಲ್ ಮಿಡಿಯಾದಲ್ಲಿ ಮುಗ್ಧ ಮಗುವಿನ ಫೋಟೋ ಒಂದು ವೈರಲ್ ಆಗುತ್ತಿದ್ದು, ಹಿಂಸೆಯನ್ನೇ ಆಧಾರವಾಗಿಟ್ಟುಕೊಂಡು ದೇಶ, ಜಗತ್ತು ಬದಲಾಯಿಸ ಹೊರಟವರಿಗೆ ಪಾಠ ಕಲಿಸುವಂತಿದೆ. ತನ್ನವರನ್ನು ಕಳೆದುಕೊಳ್ಳುವ ದುಃಖ ಏನು? ಎಂಬುವುದನ್ನು ಈ ಚಿತ್ರ ಮನಮುಟ್ಟುವಂತೆ ಹೇಳುತ್ತದೆ. 

ಎರಡು ವರ್ಷದ ಮಗುವಿಗೆ ಮಾತನಾಡಲು ಸಾಧ್ಯವಾಗದಿರಬಹುದು, ಹೊರ ಜಗತ್ತಿನ ತಿಳುವಳಿಕೆ ಇರದಿರಬಹುದು. ಆದರೆ ಆ ಪುಟ್ಟ ಮಕ್ಕಳಲ್ಲೂ ಒಂದು ಹೃದಯವಿದೆ. ತನ್ನವರನ್ನು, ತನ್ನನ್ನು ಅಪ್ಪಿ ಮುದ್ದಾಡಿಸುತ್ತಿದ್ದವರನ್ನು ಕಳೆದುಕೊಂಡ ನೋವು ಅವರಿಗೂ ಅರ್ಥವಾಗುತ್ತದೆ. 

ಪೌರತ್ವ ಮಸೂದೆ ಪಾಸ್: ಮಗುವಿಗೆ ‘ನಾಗರಿಕತಾ’ ಎಂದು ಹೆಸರಿಟ್ಟ ಪಾಕ್‌ ಮಹಿಳೆ!

ಈ ಮೂರ್ತಿ ಸಬ್ ಇನ್ಸ್ ಪೆಕ್ಟರ್ ಮೂಲಚಂದ್ರ ಕಂವರ್ ಅವರದ್ದು. ಕಂವರ್ 2018ರ ಜನವರಿ 24ರಂದು ಛತ್ತೀಸ್‌ಗಡದ ನಾರಾಯಣಪುರದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾಗಿದ್ದರು. ಡಿಸೆಂಬರ್ 13ರಂದು ಕಂವರ್ ಜನ್ಮದಿನವಾಗಿತ್ತು. 1986ರಲ್ಲಿ ಕೋರ್ಬಾ ಜಿಲ್ಲೆಯ ಘನಾಡ್ಬರಿಯಲ್ಲಿ ಜನಿಸಿದ ಕಂವರ್ 33 ವರ್ಷದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದರು. 

ಹುತಾತ್ಮ ಕಂವರ್ ಹುಟ್ಟೂರಲ್ಲಿ ಅವರ ಸ್ಮರಣಾರ್ಥ ಮೂರ್ತಿಯೊಂದನ್ನು ಸ್ಥಾಪಿಸಲಾಗಿದ್ದು, ಅವರ ಜನ್ಮದಿನದ ಪ್ರಯುಕ್ತ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ಪುಟ್ಟ ಕಾರ್ಯಕ್ರಮಕ್ಕೆ ಊರ ಜನರೆಲ್ಲಾ ಸೇರಿದ್ದರು. ಕಂವರ್ ತ್ಯಾಗ, ಬಲಿದಾನ ನೆನಪಿಸಿಕೊಂಡ ಜನರು ಕಂಬನಿ ಮಿಡಿದಿದ್ದರು. 

ಈ ಕಾರ್ಯಕ್ರಮಕ್ಕೆ ಹುತಾತ್ಮ ಕಂವರ್ ವಿಧವೆ ಪತ್ನಿ ಎರಡು ವರ್ಷದ ಪುಟ್ಟ ಮಗಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದರು. ಈ ವೇಳೆ ಅಪ್ಪನ ಮೂರ್ತಿ ಕಂಡ ಮಗಳು ಖುಷಿಯಾಗಿದ್ದು, ತನ್ನನ್ನು ಆ ಮೂರ್ತಿ ಬಳಿ ಕರೆದೊಯ್ಯುವಂತೆ ಹಠ ಹಿಡಿದಿದ್ದಾಳೆ. ಮಗಳನ್ನು ಸಮಾಧಾನಪಡಿಸಲು ತಾಯಿ ಆಕೆಯನ್ನು ಮೂರ್ತಿ ಬಳಿ ಕರೆದೊಯ್ದಿದ್ದಾಳೆ. ಅಪ್ಪನ ಮೂರ್ತಿ ಬಳಿ ತಲುಪಿದ್ದೇ ತಡ, ಪುಟ್ಟ ಕಂದ ತನ್ನ ತಂದೆಯೇ ಜೀವಂತವಾಗಿ ನಿಂತಿದ್ದಾರೆ ಎಂಬಷ್ಟು ಖುಷಿಯಲ್ಲಿ ಆ ಮೂರ್ತಿಯನ್ನು ಬಿಗಿದಪ್ಪಿ ಮುತ್ತಿಟ್ಟಿದ್ದಾಳೆ. 

ಉಗ್ರರೊಂದಿಗೆ ಹೋರಾಡಿ 24 ವರ್ಷದ ಬೆಳಗಾವಿಯ ಯೋಧ ಹುತಾತ್ಮ

ಈ ದೃಶ್ಯ ಅಲ್ಲಿಗಾಗಮಿಸಿದ್ದ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿತ್ತು. ತಾವು ಬಹಳ ಬಲಶಾಲಿ, ಏನೇ ಆದರೂ ಭಾವುಕರಾಗುವುದಿಲ್ಲ ಎಂಬವರೂ ಮಗುವಿನ ಮುಗ್ಧತೆ ಕಂಡು ಕಣ್ಣೀರು ತಡೆಯದೆ ಅತ್ತಿದ್ದಾರೆ/.