ಮೂವರು ಮುದ್ದಾದ ಹೆಣ್ಣು ಮಕ್ಕಳನ್ನು ಓದಿಸಿ, ಇನ್ನೇನು ಮದುವೆ ಮಾಡಬೇಕು ಎಂದು ಯಲ್ಲಯ್ಯ ಎಂದುಕೊಂಡಿದ್ದರು. ಆದರೆ ವಿಧಿ ಬೇರೆ ಆಟ ಆಡಿತ್ತು. ತಂದೆ-ತಾಯಿ ಒಟ್ಟಿಗೆ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇಡೀ ಗ್ರಾಮವೇ ಒಂದೇ ಅಲ್ಲದೆ, ಇಡೀ ರಾಜ್ಯ ಕಣ್ಣೀರು ಹಾಕುತ್ತಿದೆ.

ಅಲ್ಲೊಂದು ಸುಂದರವಾದ ಕುಟುಂಬ, ಇನ್ನೇನು ಮುದ್ದಾದ ಮೂವರು ಹೆಣ್ಣು ಮಕ್ಕಳು ಶಿಕ್ಷಣ ಮುಗಿಸಿ, ಉದ್ಯೋಗ ಪಡೆಯುತ್ತಾರೆ, ಮದುವೆ ಮಾಡಬೇಕು ಎಂದುಕೊಂಡಿದ್ದ ತಂದೆ-ತಾಯಿಗೆ ಶಾಕ್‌ ಅಲ್ಲ ಭೂಮಿಯೇ ಇಬ್ಭಾಗ ಆಗುವಂತಹ ಸುದ್ದಿ ಸಿಕ್ಕಿತ್ತು. ಎಡಿಗಿ ಯಲ್ಲಯ್ಯನವರ ಮನೆಯಲ್ಲಿ ಒಂದೇ ದಿನ ಒಂದಲ್ಲ, ಎರಡಲ್ಲ, ಮೂವರ ಸಾವು.

ಅಪಘಾತ ಹೇಗಾಯ್ತು?

ತನುಷಾ (22), ಸಾಯಿ ಪ್ರಿಯಾ (20), ನಂದಿನಿ (18) ಸೋಮವಾರ ಬೆಳಗ್ಗೆ ನಡೆದ ಬಸ್ ಅಪಘಾತದಲ್ಲಿ ಮೃತರಾಗಿದ್ದಾರೆ. ಈ ಅಪಘಾತದಲ್ಲಿ ಒಟ್ಟೂ 19 ಜನರಿದ್ದರು. ಹೈದರಾಬಾದ್‌ನ ಹೊರವಲಯದಲ್ಲಿರುವ ಚೆವೆಲ್ಲಾ ಸಮೀಪದ ಮಿರ್ಜಾಗುಡಾದಲ್ಲಿ ವೇಗವಾಗಿ ಬಂದ ಜಲ್ಲಿ ಲಾರಿಯೊಂದು ಟಿಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿತ್ತು. ಆ ಬಸ್‌ನಲ್ಲಿ ಈ ಹೆಣ್ಣು ಮಕ್ಕಳಿದ್ದರು. ಸೋಮವಾರ ರಾತ್ರಿ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿರುವ ಪೆರಕಂಪಲ್ಲಿಯಲ್ಲಿ ಈ ಮೂವರು ಹೆಣ್ಣುಮಕ್ಕಳ ಅಂತ್ಯಕ್ರಿಯೆಗಳು ನಡೆದವು. ಈ ಸಾವಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ಕಣ್ಣೀರು ಹಾಕಿದೆ.

ಯಲ್ಲಯ್ಯ ಯಾರು?

ಯಲ್ಲಯ್ಯ ಅವರು ವೃತ್ತಿಯಲ್ಲಿ ಡ್ರೈವರ್. ಅವರು ಟ್ರಾವೆಲ್‌ ಏಜೆನ್ಸಿ ನಡೆಸುತ್ತಿದ್ದಾರೆ. ತಾಂಡೂರು ಪಟ್ಟಣದಲ್ಲಿ ಕುಟುಂಬದ ಜೊತೆ ಅವರು ವಾಸವಾಗಿದ್ದಾರೆ. ಸೋಮವಾರ ಬೆಳಿಗ್ಗೆ 6.15ಗೆ ಅವರು ತಮ್ಮ ಮೂವರು ಪುತ್ರಿಯರನ್ನು ಹೈದರಾಬಾದ್‌ಗೆ ಹೋಗುವ ಬಸ್ ಹತ್ತಿಸಿದ್ದಾರೆ. ಅಕ್ಟೋಬರ್ 17 ರಂದು ಅವರು ಹಿರಿಯ ಮಗಳು ಅನುಷಾರ ಮದುವೆ ಮಾಡಿಸಿದ್ದರು. ಈ ಮದುವೆಯಲ್ಲಿ ಮೂವರು ಹೆಣ್ಣು ಮಕ್ಕಳು ಖುಷಿಯಿಂದ ಭಾಗಿಯಾಗಿ, ಡ್ಯಾನ್ಸ್‌ ಮಾಡಿದ್ದ ವಿಡಿಯೋ ಈಗ ವೈರಲ್‌ ಆಗ್ತಿದೆ.

ದೇವರು ಯಾಕೆ ಹೀಗೆ ಮಾಡಿದ?

ಎಂಬಿಎ ವಿದ್ಯಾರ್ಥಿನಿ ತನುಷಾ, ಪದವಿಯ ಕೊನೆಯ ಮತ್ತು ಮೊದಲ ವರ್ಷಗಳಲ್ಲಿ ಓದುತ್ತಿದ್ದ ಪ್ರಿಯಾ, ನಂದಿನಿ, ಮೂವರು ಹೈದರಾಬಾದ್‌ನ ವೀರನಾರಿ ಚಕಾಲಿ ಇಲಮ್ಮ ಮಹಿಳಾ ವಿಶ್ವವಿದ್ಯಾಲಯದಲ್ಲಿ ಓದುತಿದ್ದರು. ಮಕ್ಕಳ ಸಾವಿನ ಬಗ್ಗೆ ಕಣ್ಣೀರು ಹಾಕುತ್ತಿರುವ ತಂದೆ "ದೇವರು ನನಗೆ ಯಾಕೆ ಹೀಗೆ ಮಾಡಿದ? ಒಂದೇ ಬಾರಿಗೆ ಮೂವರನ್ನೂ ಯಾಕೆ ತೆಗೆದುಕೊಂಡು ಹೋದನು" ಎಂದು ಯಲ್ಲಯ್ಯ ಕಣ್ಣೀರು ಹಾಕುತ್ತಿದ್ದಾರೆ.

ತಂದೆಯ ಕಣ್ಣೀರು

"ಮದುವೆಯಲ್ಲಿ ನಾನು ಚೆನ್ನಾಗಿ ಕಾಣಬೇಕು ಎಂದು ಹೊಸ ಬಟ್ಟೆ ಕೊಡಿಸಿದರು, ಮೇಕಪ್‌ ಮಾಡಿದರು. ನನ್ನ ಬೈಕ್‌ನಲ್ಲಿ ನಾನೇ ಒಬ್ಬರಾದ ಮೇಲೆ ಒಬ್ಬರಂತೆ ಬಸ್ಟ್‌ಸ್ಟ್ಯಾಂಡ್‌ಗೆ ಬಿಟ್ಟು ಬಂದೆ" ಎಂದು ಯಲ್ಲಯ್ಯ ಹೇಳುತ್ತಾರೆ.

ಮಗ ಇದ್ದಾನೆ!

"ಭಾನುವಾರವೇ ಹೈದರಾಬಾದ್‌ಗೆ ಹೋಗ್ತೀನಿ ಅಂತ ಹೇಳಿದರು. ಆದರೆ ನಾನು ಸೋಮವಾರ ಬೆಳಗ್ಗೆ ಹೊರಡಿ ಎಂದೆ. ಭಾನುವಾರ ಹೋಗಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ” ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇವರ ಮಗ ಮುರಳಿ, 10ನೇ ತರಗತಿ ವಿದ್ಯಾರ್ಥಿ, ಪತ್ನಿ ವಿಠಲಾಬಾಯಿ ಕೂಡ ಇನ್ನೂ ಆಘಾತದಲ್ಲಿದ್ದಾರೆ.