ನವದೆಹಲಿ(ಜ.27): ರೈತರ ಟ್ರ್ಯಾಕ್ಟರ್‌ ರಾರ‍ಯಲಿ ಹಿಂಸಾ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದಿಲ್ಲಿಯಲ್ಲಿ 15ರಿಂದ 20 ಅರೆಸೇನಾ ತುಕಡಿ ನಿಯೋಜನೆಗೆ ಸೂಚಿಸಿದ್ದಾರೆ.

ಮಂಗಳವಾರ ಸಂಜೆ ಶಾ ಅವರು ದೆಹಲಿ ಪೊಲೀಸರು ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಅಧಿಕಾರಿಗಳ ಭದ್ರತಾ ಪರಿಶೀಲನೆ ಸಭೆ ನಡೆಸಿದರು. ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ, ದೆಹಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾತ್ಸವ ಅವರು ಪರಿಸ್ಥಿತಿಯ ಮಾಹಿತಿ ನೀಡಿದರು.

ಇದರ ಬೆನಲ್ಲೇ, ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಸುಮಾರು 1,500ರಿಂದ 2,000 ಸಿಬ್ಬಂದಿಯನ್ನು ಒಳಗೊಂಡ 15ರಿಂದ 20 ತುಕಡಿಗಳನ್ನು ಭದ್ರತೆಗೆ ನಿಯೋಜಿಸುವಂತೆ ಸೂಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೂ ಮುನ್ನ ಕಾನೂನು ಸುವ್ಯವಸ್ಥೆ ಪಾಲನೆಗೆ ಈಗಾಗಲೇ 4,500ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.