ಜನರಿಗೆ ‘ರಿಪೇರಿಯ ಹಕ್ಕು’ ನೀಡಲು ಕೇಂದ್ರದ ಸಿದ್ಧತೆ ನಡೆಸಿದೆ. ಮೊಬೈಲ್‌, ಲ್ಯಾಪ್‌ಟಾಪ್‌, ವಾಹನಗಳ ರಿಪೇರಿಗೆ ಅನುಕೂಲ ವಾಗುವ ಜೊತೆಗೆ  ಉತ್ಪಾದಕರ ಏಕಸ್ವಾಮ್ಯ, ಜನರಿಗಾಗುವ ನಷ್ಟತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. 

ನವದೆಹಲಿ (ಜು.15): ಮೊಬೈಲ್‌, ಲ್ಯಾಪ್‌ಟಾಪ್‌, ಕಾರು ಮುಂತಾದ ಗ್ರಾಹಕ ಉತ್ಪನ್ನಗಳು ಕೆಟ್ಟಾಗ ಅವುಗಳನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ರಿಪೇರಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ರಿಪೇರಿಯ ಹಕ್ಕು’ ಎಂಬ ಹೊಸ ಅಧಿಕಾರವನ್ನು ಜನರಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಕ್ಕು ಜಾರಿಗೆ ಬಂದರೆ, ಯಾವುದೇ ವಸ್ತುವನ್ನು ‘ಒಮ್ಮೆ ಓಪನ್‌ ಮಾಡಿದರೆ ಅಥವಾ ಮೂರನೇ ವ್ಯಕ್ತಿಯಿಂದ ರಿಪೇರಿ ಮಾಡಿಸಿದರೆ ವಾರಂಟಿ ಅನ್ವಯಿಸುವುದಿಲ್ಲ’ ಎಂದು ಕಂಪನಿಗಳು ಷರತ್ತು ವಿಧಿಸುವಂತಿಲ್ಲ. ಅಲ್ಲದೆ, ಬಿಡಿ ಭಾಗಗಳ ಮೇಲೆ ಏಕಸ್ವಾಮ್ಯ ಉಳಿಸಿಕೊಂಡು ಬೇರೆ ಯಾರಿಗೂ ಅವುಗಳನ್ನು ರಿಪೇರಿ ಮಾಡಲು ಬಾರದಂತೆ ಅವುಗಳನ್ನು ವಿನ್ಯಾಸಗೊಳಿಸುವಂತಿಲ್ಲ. ನಮ್ಮಿಂದ ಕೊಂಡ ಉತ್ಪನ್ನವನ್ನು ನಮ್ಮ ಅಧಿಕೃತ ಸವೀರ್‍ಸ್‌ ಸೆಂಟರ್‌ನಲ್ಲೇ ರಿಪೇರಿ ಮಾಡಿಸಿಕೊಳ್ಳಬೇಕು ಎಂದು ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ತಮ್ಮ ಉತ್ಪನ್ನದ ಬಗ್ಗೆ ಹಾಗೂ ಬಿಡಿ ಭಾಗಗಳ ಬಗ್ಗೆ ಸಂಪೂರ್ಣ ವಿವರವಿರುವ ಮತ್ತು ಅವುಗಳ ದುರಸ್ತಿಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಕೈಪಿಡಿಯನ್ನು ಪ್ರಕಟಿಸುವುದು ಕಂಪನಿಗಳಿಗೆ ಕಡ್ಡಾಯವಾಗಲಿದೆ.

ಯಾವ ಉಪಕರಣ/ವಸ್ತುಗಳು?: ಜನರಿಗೆ ‘ದುರಸ್ತಿಯ ಹಕ್ಕು’ ನೀಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆ ಸಮಿತಿಯು ಈಗಾಗಲೇ ಒಂದು ಸಭೆ ನಡೆಸಿದೆ. ಸಭೆಯಲ್ಲಿ ಮುಖ್ಯವಾಗಿ ಕೃಷಿ ಉಪಕರಣಗಳು, ಮೊಬೈಲ್‌ ಫೋನ್‌ ಮತ್ತು ಟ್ಯಾಬ್ಲೆಟ್‌ಗಳು, ಗ್ರಾಹಕ ಉತ್ಪನ್ನಗಳು, ವಾಹನಗಳು ಹಾಗೂ ವಾಹನಗಳ ಬಿಡಿ ಭಾಗಗಳನ್ನು ಈ ಹಕ್ಕಿನಡಿ ತರುವ ಬಗ್ಗೆ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉದ್ದೇಶ ಏನು?: ಜನರಿಗೆ ಕಡಿಮೆ ಖರ್ಚಿನಲ್ಲಿ ತಮ್ಮ ಉತ್ಪನ್ನಗಳನ್ನು ರಿಪೇರಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು, ಬಿಡಿ ಭಾಗಗಳ ಮೇಲೆ ಕಂಪನಿಗಳ ಏಕಸ್ವಾಮ್ಯವನ್ನು ತಪ್ಪಿಸುವುದು, ಹೊಸ ಹೊಸ ಮಾಡೆಲ್‌ಗಳನ್ನು ಜನರು ಕೊಳ್ಳುವಂತೆ ಒತ್ತಡ ಸೃಷ್ಟಿಸುವುದನ್ನು ತಪ್ಪಿಸುವುದು, ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಡಯಾಗ್ನೋಸ್ಟಿಕ್ ಟೂಲ್‌ಗಳು ಸೇರಿದಂತೆ ಸೇವಾ ಸಾಧನಗಳಿಗೆ ಭಾಗಗಳು ಮತ್ತು ಪರಿಕರಗಳನ್ನು ವ್ಯಕ್ತಿಗಳು ಸೇರಿದಂತೆ ಮೂರನೇ ವ್ಯಕ್ತಿಗಳಿಗೆ ಲಭ್ಯವಾಗುವಂತೆ ಮಾಡಬೇಕು, ಇದರಿಂದ ಸಣ್ಣ ದೋಷಗಳಿದ್ದರೆ ಉತ್ಪನ್ನವನ್ನು ಸರಿಪಡಿಸಬಹುದು ಎಂದು ಹೇಳಿಕೆ ತಿಳಿಸಿದೆ. ಯುಎಸ್, ಯುಕೆ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ದುರಸ್ತಿ ಮಾಡುವ ಹಕ್ಕನ್ನು ಗುರುತಿಸಲಾಗಿದೆ.