ನವದೆಹಲಿ(ಆ.19): ಐಐಟಿ ಮದ್ರಾಸ್‌ ಹಾಗೂ ಸಿಡ್ಯಾಕ್‌ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಮೈಕ್ರೋಪ್ರೊಸೆಸರ್‌ಗಳನ್ನು ಬಳಸಿಕೊಂಡು ತಂತ್ರಜ್ಞಾನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವವರಿಗೆ 4.3 ಕೋಟಿ ರು. ಬಹುಮಾನದ ಸ್ಪರ್ಧೆಯೊಂದನ್ನು ಕೇಂದ್ರ ಸರ್ಕಾರ ಆಯೋಜಿಸಿದೆ.

ಶಕ್ತಿ (32 ಬಿಟ್‌) ಹಾಗೂ ವೆಗಾ (64 ಬಿಟ್‌) ಎಂಬ ಎರಡು ಮೈಕ್ರೋಪ್ರೊಸೆಸರ್‌ಗಳನ್ನು ಐಐಟಿ ಮದ್ರಾಸ್‌ ಹಾಗೂ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌್ಡ ಕಂಪ್ಯೂಟಿಂಗ್‌ (ಸಿಡ್ಯಾಕ್‌) ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಅವನ್ನು ಬಳಸಿಕೊಂಡು ತಂತ್ರಜ್ಞಾನ ಉತ್ಪನ್ನಗಳನ್ನು ಸ್ಪರ್ಧಿಗಳು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ‘ಸ್ವದೇಶಿ ಮೈಕ್ರೋಪ್ರೊಸೆಸರ್‌ ಚಾಲೆಂಜ್‌- ಇನ್ನೋವೇಟ್‌ ಸಲ್ಯೂಷನ್ಸ್‌ ಫಾರ್‌ ಆತ್ಮನಿರ್ಭರ್‌ ಭಾರತ್‌’ ಎಂಬ ಸ್ಪರ್ಧೆಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ನಿಶಾನೆ ತೋರಿದ್ದಾರೆ.

2021ರ ಜೂನ್‌ನಲ್ಲಿ ಸ್ಪರ್ಧೆ ಅಂತ್ಯವಾಗಲಿದೆ. ಸೆಮಿ ಫೈನಲ್‌ ಹಂತ ತಲುಪಿದ 100 ಮಂದಿಗೆ ಒಟ್ಟಾರೆ 1 ಕೋಟಿ, ಅಂತಿಮ ಹಂತ ತಲುಪಿದ 25 ಮಂದಿಗೆ ಒಟ್ಟಾರೆ 1 ಕೋಟಿ ಹಾಗೂ ಫೈನಲ್‌ನಲ್ಲಿ ಟಾಪ್‌ 10ರೊಳಗೆ ಸ್ಥಾನ ಪಡೆಯುವವರಿಗೆ 2.3 ಕೋಟಿ ರು. ನಿಧಿ ಹಾಗೂ 12 ತಿಂಗಳ ಇನ್‌ಕ್ಯುಬೇಷನ್‌ ಬೆಂಬಲ ದೊರೆಯಲಿದೆ.