ರೆಮ್‌ಡೆಸಿವಿರ್ ಪಡೆಯಲು ಹೊಸ ನಿಯಮ: ಈ ರೋಗಿಗಳಿಗಷ್ಟೇ ಇನ್ನು ಲಭ್ಯ!
ಆಕ್ಸಿಜನ್ ಪಡೆಯುತ್ತಿರುವ ರೋಗಿಗಷ್ಟೇ ರೆಮ್‌ಡೆಸಿವಿರ್| ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ| ಪ್ಲಾಸ್ಮಾ, ಟೋಸಿಲಿಜುಮಾಬ್ ಔಷಧಕ್ಕೂ ನಿಯಮ
ನವದೆಹಲಿ(ಏ.24): ದೇಶಾದ್ಯಂತ ಕೊರೋನಾ ರೋಗಿಗಳಿಗೆ ನೀಡುವ ರೆಮ್‌ಡೆಸಿವಿರ್ ಇಂಜೆಕ್ಷನ್‌ಗೆ ತೀವ್ರ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಿಜವಾಗಿಯೂ ಅಗತ್ಯವಿರುವವರಿಗೆ ಈ ಔಷಧ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಏಮ್ಸ್ ಹಾಗೂ ಐಸಿಎಂಆರ್‌ನ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಬಿಡುಗಡೆ ಮಾಡಿರುವ ಈ ಮಾರ್ಗಸೂಚಿಯನ್ವಯ ಕೊರೋನಾ ಬಂದವರಿಗೆಲ್ಲ ರೆಮ್‌ಡೆಸಿವಿರ್ ನೀಡಬಾರದು. ಮಧ್ಯಮ ಹಾಗೂ ತೀವ್ರ ಪ್ರಮಾಣದ ಸೋಂಕು ಇರುವವರಿಗೆ ಮಾತ್ರ ನೀಡಬೇಕು. ಅದರಲ್ಲೂ, ಯಾವ ರೋಗಿಗೆ ಹೊರಗಿನಿಂದ ಆಮ್ಲಜನಕ ನೀಡಲಾಗುತ್ತಿದೆಯೋ ಅವರಿಗೆ ಮಾತ್ರ ನೀಡಬೇಕು. ಸೋಂಕು ತಗಲಿದ 10 ದಿನದೊಳಗೇ ನೀಡಬೇಕು. ಮತ್ತು ಮನೆಯಲ್ಲಿರುವ ರೋಗಿಗಳಿಗೆ ನೀಡಬಾರದು. ಗಂಭೀರವಾದ ಕಿಡ್ನಿ ರೋಗಿಗಳಿಗೆ ಅಥವಾ ಹೆಪಟಿಕ್ ಸಮಸ್ಯೆಯಿರುವವರಿಗೆ ನೀಡಬಾರದು ಎಂದು ಸೂಚಿಸಲಾಗಿದೆ.
ಇದೇ ವೇಳೆ, ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವುದಾದರೆ ಸೋಂಕಿನ ಲಕ್ಷಣಗಳು ಗೋಚರಿಸಿದ ಏಳು ದಿನದೊಳಗೆ ನೀಡಬೇಕು. ಮಧ್ಯಮ ಪ್ರಮಾಣದ ಸೋಂಕಿದ್ದಾಗಲೇ ಇದನ್ನು ನೀಡಬೇಕೇ ಹೊರತು ಕೊನೆಯ ಹಂತಕ್ಕೆ ಹೋದಾಗ ನೀಡಬಾರದು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಇನ್ನು, ಹೆಚ್ಚಿನ ಕೋವಿಡ್ ರೋಗಿಗಳಿಗೆ ನೀಡಲಾಗುವ ಟೋಸಿಲಿಜುಮಾಬ್ ಎಂಬ ಔಷಧವನ್ನು ಸ್ಟೆರಾಯ್ಡ್ ನೀಡಿದರೂ ಪ್ರಯೋಜನವಾಗದಿದ್ದರೆ ಮಾತ್ರ ನೀಡಬೇಕು. ಬ್ಯಾಕ್ಟೀರಿಯಾ, ಫಂಗಸ್ ಅಥವಾ ಟ್ಯುಬಕ್ರ್ಯುಲರ್ ಸೋಂಕಿದ್ದರೆ ಇದನ್ನು ನೀಡಬಾರದು. ರೋಗನಿರೋಧಕ ವ್ಯವಸ್ಥೆಯನ್ನು ಮಾರ್ಪಾಡು ಮಾಡುವ ಔಷಧ ಇದಾಗಿದೆ ಎಂದು ತಿಳಿಸಿದೆ.
ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ