ಆನ್‌ಲೈನ್ ಬೆಟ್ಟಿಂಗ್ ಜಾಹೀರಾತು ಪ್ರಸಾರ ಬೇಡ
* ಟೀವಿ, ಮುದ್ರಣ, ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ಮನವಿ
* ಈ ಜಾಹೀರಾತುಗಳು ಆರ್ಥಿಕ ಪರಿಣಾಮ ಬೀರುತ್ತಿವೆ
* ಕೇಂದ್ರದ ಕಾಯ್ದೆಗಳಿಗೆ ವಿರುದ್ಧವಾಗಿವೆ
* ವಾರ್ತಾ ಸಚಿವಾಲಯದಿಂದ ಸಲಹಾವಳಿ ಬಿಡುಗಡೆ
ನವದೆಹಲಿ(ಜೂ.14): ಜನರ ಬದುಕನ್ನು ಹಾಳು ಮಾಡುತ್ತವೆ ಎಂದು ಹೇಳಲಾದ ಆನ್‌ಲೈನ್ ಬೆಟ್ಟಿಂಗ್ ಜಾಹೀರಾತುಗಳನ್ನು ಪ್ರಸಾರ/ಮುದ್ರಣ ಮಾಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಮುದ್ರಣ, ಟೀವಿ ಹಾಗೂ ಡಿಜಿಟಲ್ ಮಾಧ್ಯಮಗಳಿಗೆ ಮನವಿ ಮಾಡಿದೆ.
ಈ ಸಂಬಂಧ ಸೋಮವಾರ ಸಲಹಾವಳಿ ಬಿಡುಗಡೆ ಮಾಡಿರುವ ಸಚಿವಾಲಯ, ‘ದೇಶದ ಬಹುತೇಕ ಭಾಗಗಳಲ್ಲಿ ಬೆಟ್ಟಿಂಗ್ ಹಾಗೂ ಜೂಜು ಅಕ್ರಮ ಎಂದು ಪರಿಗಣಿಸಲ್ಪಟ್ಟಿದೆ ಹಾಗೂ ಗ್ರಾಹಕರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಹಾಗೂ ಯುವಕರ ಮೇಲೆ ಪರಿಣಾಮ ಉಂಟು ಮಾಡುತ್ತಿವೆ’ ಎಂದೂ ತನ್ನ ಕ್ರಮಕ್ಕೆ ಕಾರಣಗಳನ್ನು ನೀಡಿದೆ.
ಅಲ್ಲದೆ, ಈ ಜಾಹೀರಾತುಗಳು ಗ್ರಾಹಕ ರಕ್ಷಣಾ ಕಾಯ್ದೆ-2019, ಕೇಬಲ್ ಟೀವಿ ನಿಯಂತ್ರಣ ಕಾಯ್ದೆ-1995, ಪ್ರೆಸ್ ಕೌನ್ಸಿಲ್ ಕಾಯ್ದೆ-1978 ಹಾಗೂ ಮಾಹಿತಿ ತಂತ್ರಜ್ಞಾನ ನಿಯಮ-2021ರ ನಿಯಮಗಳಿಗೆ ಅನುಗುಣವಾಗಿಲ್ಲ. ಇತ್ತೀಚೆಗೆ ಮಾಧ್ಯಮಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಜಾಹೀರಾತುಗಳ ಭರಾಟೆ ಜೋರಾಗಿದೆ. ಇಂಥ ಜಾಹೀರಾತುಗಳು ನಿರ್ಬಂಧಿತ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತವೆ. ಹೀಗಾಗಿ ವಿಶಾಲ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮುದ್ರಣ, ವಿದ್ಯುನ್ಮಾನ ಹಾಗೂ ಟೀವಿ ಮಾಧ್ಯಮಗಳು ಇವುಗಳ ಪ್ರಸಾರ/ಮುದ್ರಣ ಮಾಡಬಾರದು ಎಂದು ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಆನ್‌ಲೈನ್ ಬೆಟ್ಟಿಂಗ್ ಅನ್ನು ರಾಜ್ಯ ಸರ್ಕಾರ ನಿರ್ಬಂಧಿಸಿತ್ತು. ಆದರೆ ಈ ನಿರ್ಬಂಧವನ್ನು ಹೈಕೋರ್ಚ್ ರದ್ದು ಮಾಡಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಲಹಾವಳಿ ಬಿಡುಗಡೆ ಮಾಡಿದ್ದು ಇಲ್ಲಿ ಗಮನಾರ್ಹ.