ಚೆನ್ನೈ(ಫೆ.14): ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ. ಚುನಾವಣಾ ಹೊಸ್ತಿಲಲ್ಲೇ ತಮಿಳುನಾಡು ಪ್ರವಾಸದಲ್ಲಿರುವ ಪಿಎಂ ಮೋದಿ ಚೆನ್ನೈನಲ್ಲಿ ಪ್ರಮುಖ ಘೋಷಣೆ ಮಾಡಿದ್ದಾರೆ.  ದೇವೇಂದ್ರ ಕುಲಾ ವೆಲ್ಲಾಲಾರ್‌ ಸಮುದಾಯದ ಬೇಡಿಕೆಯನ್ನು ಕೇಂದ್ರ ಒಪ್ಪಿಕೊಂಡಿದೆ ಎಂದಿರುವ ಪಿಎಂ ಮೋದಿ ಇನ್ಮುಂದೆ ಈ ಸಮುದಾಯದ  7 ಜಾತಿ ಜನರನ್ನು ದೇವೇಂದ್ರ ಕುಲಾ ವೆಲ್ಲಾಲಾರ್‌ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

ಇದಕ್ಕೂ ಮುನ್ನ ಪಿಎಂ ಮೋದಿ ಚೆನ್ನೈನಲ್ಲಿ ವಿಭಿನ್ನ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದಾದ ಬಳಿಕ ಜನರನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ ಕೇಂದ್ರ ಸರ್ಕಾರ ದೇವೇಂದ್ರ ಕುಲಾ ವೆಲ್ಲಾಲಾರ್‌ ಸಮುದಾಯದ ಬಹು ದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ ಎಂದು ತಿಳಿಸಲು ನನಗೆ ಬಹಳ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಇನ್ಮುಂದೆ ಇದರಡಿ ಸೇರ್ಪಡೆಗೊಳ್ಳುವ ಎಲ್ಲಾ ಜಾತಿ ಜನರು ದೇವೇಂದ್ರ ಕುಲಾ ವೆಲ್ಲಾಲಾರ್ ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದ್ದಾರೆ. ಉಪ ಜಾತಿಯಿಂದ ಇವರನ್ನು ಯಾರೂ ಕರೆಯುವುದಿಲ್ಲ ಎಂದಿದ್ದಾರೆ. ಸರ್ಕಾರ ಇದಕ್ಕಾಗಿ ಬೇಕಾದ ತಿದ್ದುಪಡಿಯೊಂದಿಗೆ ಮುಂದಿನ ಅಧಿವೇಶನದ ವೇಳೆ ಮಸೂದೆ ಮಂಡಿಸಲಿದೆ ಎಂದಿದ್ದಾರೆ.

ಭಾರತೀಯ ಸೇನೆಗೆ ಸ್ವದೇಶಿ ಬಲ: ಮೋದಿಯಿಂದ ಅರ್ಜುನ ಯುದ್ಧ ಟ್ಯಾಂಕ್ ಹಸ್ತಾಂತರ!

ಬೇಡಿಕೆ ಏನು?

ದಕ್ಷಿಣ ತಮಿಳುನಾಡಿನಲ್ಲಿ ದೇವೇಂದ್ರ ಕುಲಾ ವೆಲ್ಲಾಲಾರ್ ಸಮುದಾಯದಡಿ ಪಲ್ಲರ್, ಕುಟುಂಬನ್, ಕುಲ್ಲಾಡಿ, ಪನ್ನಾಡಿ, ವಥರಿಯನ್, ದೇವೇಂದ್ರನ್ ಉಪಜಾತಿಯಿಂದ ಬರುತ್ತಿದ್ದವು. ಈ ಎಲ್ಲಾ ಜಾತಿಗಳು ಪರಿಷಿಷ್ಟ ಜಾತಿಯಡಿ ಬರುತ್ತಿದ್ದವು. ಹೀಗಿರುವಾಗ ತಮ್ಮನ್ನು ವಿಭಿನ್ನ ಜಾತಿಯಿಂದ ಕರೆಯುವ ಬದಲು ದೇವೇಂದ್ರ ಕುಲಾ ವೆಲ್ಲಾಲಾರ್‌ ಸಮುದಾಯಕ್ಕೆ ಸೇರ್ಪಡೆಗೊಳಿಸಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಜೊತೆಗೆ ಪರಿಶಿಷ್ಟ ಜಾತಿಯಿಂದ ಹೊರಗಿಡುವಂತೆಯೂ ಮನವಿ ಮಾಡಿದ್ದರು. ದಕ್ಷಿಣ ತಮಿಳುನಾಡಿನಲ್ಲಿ ದೇವೇಂದ್ರ ಕುಲಾ ವೆಲ್ಲಾಲಾರ್‌ ಸಮುದಾಯದ ಸುಮಾರು ನಲ್ವತ್ತು ಲಕ್ಷ ಜನರಿದ್ದಾರೆ.