ಅಕ್ರಮ ವಲಸೆ ಮತ್ತು ಇತರ ಕಾರಣಗಳಿಂದ ದೇಶದಲ್ಲಿ ಉಂಟಾಗುತ್ತಿರುವ ಜನಸಂಖ್ಯಾ ಸಂರಚನೆಯ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಅದರ ಅಧ್ಯಯನ ಮತ್ತು ಪರಿಹಾರೋಪಾಯಗಳಿಗಾಗಿ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವಲೇಕರ್ ನೇತೃತ್ವದದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. 

ನವದೆಹಲಿ (ಮೇ.27): ಅಕ್ರಮ ವಲಸೆ ಹಾಗೂ ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶಾದ್ಯಂತ ಕಂಡುಬರುತ್ತಿರುವ ಜನಸಂಖ್ಯಾ ಸಂರಚನೆ (demographic change in India) ಯಲ್ಲಿನ ಭಾರೀ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ(Centre), ಈ ಬೆಳವಣಿಗೆಗೆ ಕಾರಣ ಮತ್ತು ಅದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದೆ.

Add Asianetnews Kannada as a Preferred SourcegooglePreferred

ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ(PM Modi) ಅವರು ಈ ರೀತಿಯ ಸಮಿತಿ ರಚಿಸುವ ಕುರಿತು ಘೋಷಣೆ ಮಾಡಿದ್ದರು. ಅದರಂತೆ ಇದೀಗ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್‌ ಪ್ರಭಾಕರ್‌ ನಾವಲೇಕರ್‌ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಇದು ಜನಸಂಖ್ಯಾ ಬದಲಾವಣೆಯ ಅಧ್ಯಯನ ನಡೆಸುವುದು ಮಾತ್ರವಲ್ಲದೆ ಅದನ್ನು ನಿಯಂತ್ರಿಸುವ ಪರಿಹಾರೋಪಾಯಗಳನ್ನೂ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಶಾ, ‘ಒಳನುಸುಳುವಿಕೆ ಹಾಗೂ ಇತರೆ ಕಾರಣಗಳು ದೇಶದಲ್ಲಿ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗೆ ಕಾರಣವಾಗುತ್ತಿವೆ. ಇದು ಯಾವುದೇ ದೇಶದ ಇಂದು ಹಾಗೂ ನಾಳಿನ ಭವಿಷ್ಯಕ್ಕೆ ಗಂಭೀರ ಸವಾಲುಗಳನ್ನು ಸೃಷ್ಟಿಸಲಿದೆ. ಈ ಸವಾಲು ಎದುರಿಸಲು ಆ.15, 2025ರಂದು ಜನಸಂಖ್ಯಾ ಬದಲಾವಣೆ ಕುರಿತು ಉನ್ನತಮಟ್ಟದ ಸಮಿತಿ ರಚಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಆ ಸಮಿತಿ ಇದೀಗ ರಚನೆಯಾಗಿದೆ ಎಂದು ಹೇಳಲು ನಾನು ಖುಷಿಪಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ನಾಲ್ಕು ಮಂದಿ ಸದಸ್ಯರು:

ನ್ಯಾ.ನಾವಲೇಕರ್‌ ನೇತೃತ್ವದ ಈ ಸಮಿತಿಯಲ್ಲಿ ಜನಗಣತಿ ಆಯುಕ್ತರು, ನಿವೃತ್ತ ಐಎಎಸ್‌ ಅಧಿಕಾರಿ ದುರ್ಗಾ ಶಂಕರ್ ಮಿಶ್ರಾ, ನಿವೃತ್ತ ಐಪಿಎಸ್‌ ಅಧಿಕಾರಿ ಬಾಲಾಜಿ ಶ್ರೀವಾಸ್ತವ ಮತ್ತು ಅರ್ಥಶಾಸ್ತ್ರಜ್ಞೆ ಡಾ.ಶಮಿಕಾ ರವಿ ಅವರು ಸದಸ್ಯರಾಗಿರಲಿದ್ದಾರೆ. ಗೃಹ ವ್ಯವಹಾರಗಳ ಖಾತೆಯ ಜಂಟಿ ಕಾರ್ಯದರ್ಶಿ ಅವರು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನಸಂಖ್ಯಾ ಬದಲಾವಣೆಯು ಗಂಭೀರ ವಿಚಾರವಾಗಿದ್ದು, ಇದು ದೇಶದ ಸಾರ್ವಭೌಮತ್ವ ಮಾತ್ರವಲ್ಲದೆ ದೇಶದ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಮಾಜಿಕ ಸಂರಚನೆ ಮತ್ತು ಗುಡ್ಡಗಾಡು ಸಮಾಜದ ಸಂರಕ್ಷಣೆ ವಿಚಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ಶಾ ಹೇಳಿದ್ದಾರೆ.

ಮಾದರಿ ವಿಶ್ಲೇಷಣೆ:

ಈ ಸಮಿತಿಯು ಅಕ್ರಮ ವಲಸಿಗರು ಹಾಗೂ ಇತರೆ ಅಸ್ವಾಭಾವಿಕ ಕಾರಣಗಳಿಂದ ದೇಶಾದ್ಯಂತ ಆಗುತ್ತಿರುವ ಜನಸಂಖ್ಯಾ ಬದಲಾವಣೆ ಕುರಿತು ಸಮಗ್ರವಾದ ಅಧ್ಯಯನ ನಡೆಸಲಿದೆ. ಜತೆಗೆ, ಧಾರ್ಮಿಕ ಹಾಗೂ ಸಾಮಾಜಿಕ ಸಮುದಾಯಗಳ ಹಂತದಲ್ಲಿ ಆಗುತ್ತಿರುವ ಅಸಹಜ ಜನಸಂಖ್ಯಾ ಬದಲಾವಣೆಗಳ ಮಾದರಿಯನ್ನು ವಿಶ್ಲೇಷಣೆ ನಡೆಸಲಿದೆ ಹಾಗೂ ಇದಕ್ಕೆ ಯೋಜಿತ ಮತ್ತು ಕಾಲಮಿತಿಯ ಪರಿಹಾರವನ್ನೂ ನೀಡಲಿದೆ ಎಂದು ಶಾ ತಿಳಿಸಿದ್ದಾರೆ.

ಅಲ್ಲದೆ ಇಂಥ ಬದಲಾವಣೆಯ ಹಿಂದಿನ ಶಕ್ತಿಗಳು ಅಥವಾ ಕಾರಣಗಳು, ಯೋಜಿತ ಒಳನುಸುಳುವಿಕೆ ಬಗ್ಗೆಯೂ ಗಮನ ಹರಿಸಲಿದೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮೋದಿ ಅವರು ಈ ರೀತಿಯ ಉನ್ನತಮಟ್ಟದ ಸಮಿತಿ ಕುರಿತು ಪ್ರಸ್ತಾಪಿಸಿದ್ದರು. ಅಕ್ರಮ ಒಳನುಸುಳುವಿಕೆಯ ಮೂಲಕ ಭಾರತದ ಜನಸಂಖ್ಯೆಯಲ್ಲಿ ಬದಲಾವಣೆಗೆ ಪೂರ್ವಯೋಜಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಈ ಒಳನುಸುಳುಕೋರರು ನನ್ನ ದೇಶದ ಯುವಕರ ಜೀವನೋಪಾಯವನ್ನು ಕಸಿಯುತ್ತಿದ್ದಾರೆ. ಈ ಒಳಸುಸುಳುಕೋರರು ದೇಶದ ಸಹೋದರಿಯರು ಹಾಗೂ ಪುತ್ರಿಯರನ್ನು ಗುರಿ ಮಾಡುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದರು.

ಜತೆಗೆ, ಈ ಒಳನುಸುಳುಕೋರರು ಗುಡ್ಡಗಾಡು ಜನರಿಂದ ಅವರ ಭೂಮಿಯ ಹಕ್ಕನ್ನೂ ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದ್ದ ಅವರು, ಗಡಿಭಾಗದಲ್ಲಿ ಜನಸಂಖ್ಯಾ ಬದಲಾವಣೆಯಾದಾಗ ಅವರು ರಾಷ್ಟ್ರದ ಭದ್ರತೆಯ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ ಎಂದಿದ್ದರು.