1.1 ಕೋಟಿ ಡೋಸ್ ಕೋವಿಶೀಲ್ಡ್ ಖರೀದಿ!
1.1 ಕೋಟಿ ಡೋಸ್ ಕೋವಿಶೀಲ್ಡ್ ಖರೀದಿ| ಮೊದಲ ಹಂತದ ಖರೀದಿಗೆ ಕೇಂದ್ರ ಸರ್ಕಾರದಿಂದ ಖರೀದಿ ಆರ್ಡರ್| ಪ್ರತಿ ಡೋಸ್‌ಗೆ 210 ರು.ನಂತೆ ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಖರೀದಿ| ಪುಣೆಯಿಂದ ವಿಮಾನದಲ್ಲಿ ಪೂರೈಕೆ ಆರಂಭ, ಮೊದಲ ಲಸಿಕೆ ಗುಜರಾತ್‌ಗೆ
ನವದೆಹಲಿ(ನ.12): ಜ.16ರಿಂದ ಮೊದಲ ಹಂತದ ಕೊರೋನಾ ಲಸಿಕೆ ವಿತರಣೆಗೆ ನಿರ್ಧರಿಸಿರುವ ಕೇಂದ್ರ ಸರ್ಕಾರ, ಸೋಮವಾರ ಈ ಸಂಬಂಧ 1.1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ಬೇಡಿಕೆ ಸಲ್ಲಿಸಿದೆ. ಬ್ರಿಟನ್ ಮೂಲದ ಆಕ್ಸ್‌ಫರ್ಡ್ ವಿವಿ ಮತ್ತು ಆ್ಯಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುವ ಗುತ್ತಿಗೆಯನ್ನು ಪುಣೆಯಲ್ಲಿನ ಸೀರಂ ಇನ್‌ಸ್ಟಿಸ್ಟೂಟ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪುಣೆ ಸಂಸ್ಥೆ ಮುಂದೆ ಖರೀದಿ ಬೇಡಿಕೆ ಸಲ್ಲಿಸಲಿದೆ.
ಪ್ರತಿ ಡೋಸ್ ಲಸಿಕೆಯನ್ನು ಸರ್ಕಾರ 200 ರು.ನಂತೆ ಖರೀದಿಸಲಿದೆ. ಅದಕ್ಕೆ ಜಿಎಸ್‌ಟಿ ಸೇರಿ 210 ರು. ಆಗಲಿದೆ. ಅದರಂತೆ 230 ಕೋಟಿ ರು. ವೆಚ್ಚದಲ್ಲಿ ಈ ಖರೀದಿ ಪ್ರಕ್ರಿಯೆ ನಡೆಯಲಿದೆ. 1.1 ಕೋಟಿ ಡೋಸ್ ಲಸಿಕೆಯನ್ನು 55 ಲಕ್ಷ ಜನರಿಗೆ ನೀಡಬಹುದಾಗಿದೆ. ಸರ್ಕಾರಿ ಸ್ವಾಮ್ಯದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಕೇಂದ್ರ ಸರ್ಕಾರದ ಪರವಾಗಿ ಈ ಬೇಡಿಕೆ ಸಲ್ಲಿಸಿದೆ.
ಈ ಖರೀದಿ ಬೇಡಿಕೆ ಸಲ್ಲಿಕೆಯಾದ ಬೆನ್ನಲ್ಲೇ, ಕಂಪನಿಯಿಂದ ಮೊದಲ ಡೋಸ್ ಲಸಿಕೆ ಪೂರೈಕೆ ಸೋಮವಾರ ಸಂಜೆಯಿಂದಲೇ ಆರಂಭವಾಗಿದ್ದು, ಮೊದಲ ಲಸಿಕೆ ಮಂಗಳವಾರ ಗುಜರಾತ್ ತಲುಪಲಿದೆ. ದೇಶದ ವಿವಿಧ 60 ಕೇಂದ್ರಗಳಿಗೆ ಪುಣೆಯ ವಿಮಾನ ನಿಲ್ದಾಣದಿಂದ ಲಸಿಕೆ ಪೂರೈಕೆಯಾಗಲಿದ್ದು, ಅಲ್ಲಿಂದ ಲಸಿಕೆ ಡಿಪೋಗಳಿಗೆ ವಿತರಣೆ ಮಾಡಲಾಗುವುದು.
ಭಾರತ ಸರ್ಕಾರ ಕೋವಿಶೀಲ್ಡ್ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಮಾಡಲು ಈಗಾಗಲೇ ಅನುಮೋದನೆ ನೀಡಿದೆ. ಅದರಂತೆ ಇದೀಗ ಮೊದಲ ಹಂತದಲ್ಲಿ ಕೋವಿಶೀಲ್ಡ್ ಜೊತೆಗೆ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರವೇ ಕೋವ್ಯಾಕ್ಸಿನ್ ಜೊತೆಗೂ ಸರ್ಕಾರ ಖರೀದಿ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.