ತಮಿಳುನಾಡಿನ ಹೌಸ್‌ಫುಲ್‌ ಚಿತ್ರಮಂದಿರಕ್ಕೆ ಕೇಂದ್ರ ಬ್ರೇಕ್‌| ಶೇ.50ರಷ್ಟುಮಾತ್ರ ಭರ್ತಿಗೆ ಕೇಂದ್ರದ ಕಾರ್ಯಸೂಚಿ ಇದೆ| ಹೀಗಾಗಿ ಶೇ.100ರಷ್ಟು ಸೀಟು ಭರ್ತಿ ಅನುಮತಿ ಹಿಂಪಡೆಯಿರಿ| ಪಳನಿಸ್ವಾಮಿ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಪತ್ರ

ನವದೆಹಲಿ(ಜ.07): ಕೊರೋನಾ ವೈರಸ್‌ ಲಾಕ್‌ಡೌನ್‌ ಅಂತ್ಯದ ನಂತರ, ದೇಶದಲ್ಲೇ ಮೊದಲ ಬಾರಿ ಸಿನಿಮಾ ಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅನುಮತಿ ನೀಡಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಈ ಅನುಮತಿ ಹಿಂಪಡೆಯಿರಿ ಎಂದು ಕೇಂದ್ರ ಗೃಹ ಸಚಿವಾಲಯವು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದೆ.

ಕೊರೋನಾ ವೈರಸ್‌ ನಿಯಂತ್ರಣ ಕುರಿತ ಮಾರ್ಗಸೂಚಿಗಳು ಜನವರಿ 31ರವರೆಗೆ ವಿಸ್ತರಣೆಯಾಗಿವೆ. ಈ ಮಾರ್ಗಸೂಚಿಗಳಲ್ಲಿ ಶೇ.50ರಷ್ಟುಮಾತ್ರ ಸಿನಿಮಾ ಮಂದಿರಗಳು ಭರ್ತಿ ಆಗಬೇಕು ಎಂಬ ಸೂಚನೆಯಿದೆ. ಹೀಗಾಗಿ ಈ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳು ಬದಲಿಸಬಾರದು. ಕಠಿಣವಾಗಿ ಇವುಗಳನ್ನು ಜಾರಿಗೊಳಿಸಲೇಬೇಕು’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ತಮಿಳುನಾಡು ಮುಖ್ಯ ಕಾರ್ಯದರ್ಶಿ ಷಣ್ಮುಗಂ ಅವರಿಗೆ ಬರೆದ ಪತ್ರದಲ್ಲಿ ಮಂಗಳವಾರ ತಾಕೀತು ಮಾಡಿದ್ದಾರೆ.

‘ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಬೇಕು ಎಂಬ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್‌ ಕೂಡ ನೀಡಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ‘ಈ ಎಲ್ಲ ಕಾರಣಗಳಿಗಾಗಿ ಈ ಮಾರ್ಗಸೂಚಿಗಳು ಪಾಲನೆ ಆಗುವಂಥ ಆದೇಶ ಹೊರಡಿಸಬೇಕು’ ಎಂದು ತಿಳಿಸಲಾಗಿದೆ.

ಪೊಂಗಲ್‌ ಹಬ್ಬದ ಕಾರಣ ಬಿಗ್‌ ಬಜೆಟ್‌ ಚಿತ್ರಗಳನ್ನು ಬಿಡುಗಡೆ ಮಾಡಲು ತಮಿಳುನಾಡಿನ ನಟ-ನಿರ್ಮಾಪಕರು ಮುಂದಾಗಿದ್ದಾರೆ. ಹಾಗಾಗಿ ಅವರ ಕೋರಿಕೆ ಮನ್ನಿಸಿ ಇತ್ತೀಚೆಗೆ ರಾಜ್ಯ ಸರ್ಕಾರವು ಥಿಯೇಟರ್‌ ಸೀಟುಗಳ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿತ್ತು.