ನವದೆಹಲಿ(ಆ.25): ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ತೆರವು ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಹಾಂಕ್ ಕಾಂಗ್ ದೇಶಕ್ಕೆ ಭಾರತ ವಿಮಾನ ಪ್ರವೇಶಿದಂತೆ ನಿರ್ಬಂಧ ಹೇರಲಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದಿಂದ ತೆರಳಿದ 11 ಮಂದಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿತ್ತು. ಈ ಕಾರಣಕ್ಕೆ ಹಾಂಕ್ ಕಾಂಗ್ ಭಾರತದ ವಿಮಾನಗಳಿಗೆ ನಿರ್ಬಂಧಿಸಿದೆ. ಈ ಬೆಳವಣಿಗೆ ಬಳಿಕ ಇದೀಗ ಕೇಂದ್ರ ಸರ್ಕಾರ ವಿದೇಶಕ್ಕೆ ಪ್ರಯಾಣ ಮಾಡುವ ಪ್ರತಿಯೊಬ್ಬರಿಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಲು ಮುಂದಾಗಿದೆ.

ವಿದೇಶದಲ್ಲಿದ್ದವರಿಗೆ ಆಶಾಕಿರಣವಾದ ವಂದೇ ಭಾರತ್ ಮಿಶನ್ ಏರ್ ಇಂಡಿಯಾ ವಿಮಾನದ ವಿವರ!

ನೂತನ ಮಾರ್ಗಸೂಚಿ ಕುರಿತು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಕೊರೋನಾ ವೈರಸ್ ಕಾರಣ ವಿದೇಶಗಳು ಭಾರತದ ವಿಮಾನಕ್ಕೆ ನಿರ್ಬಂಧ ಹೇರುತ್ತಿದೆ. ಹೀಗಾಗಿ ಭಾರತದಿಂದ ವಿದೇಶ ಪ್ರಯಾಣ ಮಾಡುವ ಪ್ರತಿಯೊಬ್ಬರು ಕೊರೋನಾ ಟೆಸ್ಟ್ ಮಾಡಿಸಿ ರಿಪೋರ್ಟ್ ಇರಲೇಬೇಕು. ನೆಗಟೀವ್ ರಿಪೋರ್ಟ್ ಇದ್ದರೆ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದಿದ್ದಾರೆ.

ಸದ್ಯ ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ 7 ದಿನದ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್ ನಿಯಮ ಜಾರಿಯಲ್ಲಿದೆ. ಆದರೆ ವಿದೇಶ ಪ್ರಯಾಣ ಮಾಡುವವರಿಗೆ ನಿಲ್ದಾಣದಲ್ಲಿನ ಟೆಂಪರೇಚರ್ ಸ್ಕಾನಿಂಗ್ ಮಾತ್ರ ಮಾಡಲಾಗುತ್ತಿದೆ. ಇದೀಗ ಪ್ರಯಾಣಕ್ಕೂ ಮುನ್ನವೇ ಪ್ರಯಾಣಕರು ಕೊವಿಡ್ 19 ಟೆಸ್ಟ್ ಮಾಡಿಸಿರಬೇಕು ಎಂದು ವಿಮಾನಯಾನ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಏರ್ ಇಂಡಿಯಾ ವಿಮಾನದ ಮೂಲಕ ಹಾಂಕ್‌ ಕಾಂಗ್‌ಗೆ ಆಗಮಿಸಿದ 14 ಭಾರತೀಯರ ಪೈಕಿ 11 ಮಂದಿಗೆ ಕೊರೋನಾ ವೈರಸ್ ತಗುಲಿರುವುದು ಇಲ್ಲಿನ ಪರೀಕ್ಷೆಯಲ್ಲಿ ದೃಢಪಟಟ್ಟಿತ್ತು. ಹೀಗಾಗಿ ಭಾರತದ ವಿಮಾನಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಹಾಂಕ್‌ಕಾಂಗ್ ವಿಮಾನಯಾನ ಸಚಿವಾಲಯ ಹೇಳಿದೆ.