ಅಪಾಯ ತಪ್ಪಿದ್ದಲ್ಲ: ಕೊರೋನಾ ಗೆದ್ದವರಿಗೆ ಕೇಂದ್ರದ ಹೆಲ್ತ್ ಟಿಪ್ಸ್!
ಕೊರೋನಾ ಗೆದ್ದವರಿಗೆ ಕೇಂದ್ರದ ಹೆಲ್ತ್ ಟಿಪ್ಸ್| ಯೋಗ, ಧ್ಯಾನ ಮಾಡಿ, ಚ್ಯನವಪ್ರಾಶ ಸೇವಿಸಿ| ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮರೆಯಬೇಡಿ| ಪ್ರಾಣಾಯಾಮ, ಬೆಳಗ್ಗೆ , ಸಂಜೆ ವಾಕಿಂಗ್ ಮಾಡಿ| ಆರೋಗ್ಯ ಸಚಿವಾಲಯದಿಂದ ಸಲಹೆ ಬಿಡುಗಡೆ
ನವದೆಹಲಿ(ಸೆ.14): ಕೊರೋನಾದಿಂದ ಸಂಪೂರ್ಣ ಚೇತರಿಸಿಕೊಂಡಿರುವವರು ಸೋಂಕು ನಿವಾರಣೆಯಾಯಿತೆಂದು ಮೈಮರೆಯುವಂತಿಲ್ಲ. ಸೋಂಕು ಮರುಕಳಿಸದಂತೆ ಮಾಡಲು ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ಮಾಡಿದೆ. ಮಾಸ್ಕ್ ಧರಿಸುವುದರ ಜತೆಗೆ ನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ, ವಾಕಿಂಗ್ ಮಾಡುವುದರ ಜತೆಗೆ ಚ್ಯವನಪ್ರಾಶ ಸೇವಿಸುವುದರಿಂದ ಕೊರೋನಾ ವಾಪಸ್ ಬರದಂತೆ ತಡೆಗಟ್ಟಬಹುದು ಎಂದು ಕೇಂದ್ರ ಹೇಳಿದೆ.
ಮಾರಕ ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದವರು ಯಾವೆಲ್ಲಾ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ವಿವರವಾದ ಮಾಹಿತಿಯನ್ನು ಆರೋಗ್ಯ ಸಚಿವಾಲಯ ನೀಡಿದೆ. ಇದರ ಪ್ರಕಾರ ಗುಣಮುಖರಾದವರೂ ಕೂಡ ಎಂದಿನಂತೆ ಮಾಸ್ಕ್ ಧರಿಸಬೇಕು. ಸ್ವಚ್ಛತೆಗೆ ಗಮನಹರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನದೊಳಗೆ ಚಿಕಿತ್ಸೆ ಪಡೆದ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಸಾಕಷ್ಟುಪ್ರಮಾಣದಲ್ಲಿ ಬಿಸಿ ನೀರು ಕುಡಿಯಬೇಕು. ರೋಗ ನಿರೋಧಕ ಶಕ್ತಿ ವೃದ್ಧಿಗೆ ಆಯುಷ್ ವೈದ್ಯರು ಸೂಚಿಸಿದ ಔಷಧಗಳನ್ನು ಸೇವನೆ ಮಾಡಬೇಕು. ಆರೋಗ್ಯ ಸಹಕರಿಸಿದರೆ ಮನೆ ಕೆಲಸವನ್ನು ಮಾಡಬಹುದು. ವೃತ್ತಿಪರರು ಹಂತಹಂತವಾಗಿ ತಮ್ಮ ಕರ್ತವ್ಯಕ್ಕೆ ಮರಳಬೇಕು. ಆರೋಗ್ಯ ಎಷ್ಟುಸಹಕರಿಸುತ್ತೋ ಅಷ್ಟುಪ್ರಮಾಣದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡಬಹುದು. ವೈದ್ಯರ ಸಲಹೆಯಂತೆ ಉಸಿರಾಟದ ವ್ಯಾಯಾಮ ಮಾಡಬಹುದು. ಆರಾಮ ಎನ್ನಿಸುವಷ್ಟುವೇಗದಲ್ಲಿ ಬೆಳಗ್ಗೆ ಅಥವಾ ಸಂಜೆ ವಾಕ್ ಕೂಡ ಮಾಡಬಹುದು. ಬೆಳಗ್ಗೆ ವೇಳೆ ಬೆಚ್ಚಗಿನ ನೀರು ಅಥವಾ ಹಾಲಿನ ಜತೆಗೆ ಚ್ಯವನಪ್ರಾಶ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ನಿತ್ಯ ಮನೆಯಲ್ಲೇ ದೇಹದ ಉಷ್ಣಾಂಶ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ, ವೈದ್ಯರ ಸಲಹೆ ಮೇರೆಗೆ ಆಮ್ಲಜನಕ ಪ್ರಮಾಣವನ್ನು ಪರೀಕ್ಷೆ ಮಾಡಿಕೊಳ್ಳಬೇಕು. ಸತತ ಒಣಕೆಮ್ಮು ಅಥವಾ ಗಂಟಲಿನಲ್ಲಿ ಹುಣ್ಣು ಆಗಿದ್ದರೆ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಹಬೆಯನ್ನು ತೆಗೆದುಕೊಳ್ಳಬೇಕು. ಬೇರುನಾರು ಅಥವಾ ಸಂಬಾರ ಪದಾರ್ಥಗಳನ್ನು ಇದಕ್ಕೆ ಬಳಸಿಕೊಳ್ಳಬಹುದು. ಅಧಿಕ ಜ್ವರ, ಉಸಿರಾಟದ ಸಮಸ್ಯೆ, ಎದೆ ನೋವು ಮತ್ತಿತರೆ ಸಮಸ್ಯೆ ಬಗ್ಗೆ ನಿಗಾ ವಹಿಸಬೇಕು. ಕೊರೋನಾ ಕುರಿತ ಅನುಭವವನ್ನು ಸ್ನೇಹಿತರು, ಬಂಧುಗಳ ಜತೆಗೆ ಸಾಮಾಜಿಕ ಜಾಲತಾಣ, ಸಮುದಾಯ ನಾಯಕರು, ಧಾರ್ಮಿಕ ನಾಯಕರ ಮೂಲಕ ಹಂಚಿಕೊಳ್ಳಬೇಕು. ತನ್ಮೂಲಕ ಕೊರೋನಾ ಕುರಿತ ತಪ್ಪು ಕಲ್ಪನೆಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ.
ಆರೋಗ್ಯ ಟಿಫ್ಸ್‌ಗಳು
1. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ
2. ಬಿಸಿನೀರು ಕುಡಿಯಿರಿ, ಇಮ್ಯುನಿಟಿ ಹೆಚ್ಚಳ ಪಾನೀಯ ಸೇವಿಸಿ
3.ವಾಕಿಂಗ್, ಯೋಗ, ಪ್ರಾಣಾಯಾಮ ಮಾಡಿ
4. ನೀರು ಅಥವಾ ಹಾಲಿನ ಜತೆ ಚ್ಯವನಪ್ರಾಶ ಸೇವಿಸಿ
5.ಥರ್ಮಾಮೀಟರ್, ಆಕ್ಸಿಮೀಟರ್ ಇಟ್ಟುಕೊಳ್ಳಿ