Asianet Suvarna News Asianet Suvarna News

ಮತ್ತೊಂದಿಷ್ಟು ಆಪ್‌ಗಳಿಗೆ ಈಗ ಕೇಂದ್ರ ಸರ್ಕಾರದ ಲಗಾಮು

ಈ ಹಿಂದೆ ಅನೇಕ ಚೀನಾ ಆಪ್‌ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿತ್ತು ಇದೀಗ ಇನ್ನೊಂದಿಷ್ಟು ಆಪ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. 

Central Govt Action Against  china Loan App snr
Author
Bengaluru, First Published Jan 24, 2021, 7:10 AM IST

ವರದಿ :  ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು (ಜ.24):  ಸಾಲ ನೀಡುವ ಸೋಗಿನಲ್ಲಿ ನಾಗರಿಕರ ಗೌಪ್ಯ ಮಾಹಿತಿ ಕದ್ದು ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡಿದ್ದ ಚೀನಾದ ‘ಲೋನ್‌ ಆ್ಯಪ್‌’ಗಳಿಗೆ ಲಗಾಮು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು ಇತ್ತೀಚೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ದಾಖಲಾಗಿದ್ದ ವಂಚನೆ ಕೃತ್ಯಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ವಹಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಚೀನಾ ಮೂಲದ ಲೋನ್‌ ಕಂಪನಿಗಳ ಮೋಸದ ಕೃತ್ಯಗಳು ಬೆಳಕಿಗೆ ಬಂದಿದ್ದವು. ಅಲ್ಲದೆ, ಚೀನಾ ಪ್ರಜೆಗಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪ್ರತ್ಯೇಕವಾಗಿ ಪೊಲೀಸರು ಸೆರೆ ಹಿಡಿದಿದ್ದರು. ನಮ್ಮ ರಾಜ್ಯದ ಅಪರಾಧ ತನಿಖಾ ದಳ (ಸಿಐಡಿ) ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಲೋನ್‌ ಕಂಪನಿಗಳ ಹಿರಿಯ ಅಧಿಕಾರಿಗಳು ಹಾಗೂ ಏಜೆಂಟ್‌ಗಳು ಬಲೆಗೆ ಬಿದ್ದಿದ್ದರು.

ಆನ್‌ಲೈನ್ ಕ್ಲಾಸ್‌ಗಳಿಂದ ವಿಸ್ತಾರ ಸ್ಕ್ರೀನ್ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗೆ ಬೇಡಿಕೆ; ಸಮೀಕ್ಷೆ ವರದಿ! ...

ಈ ಆರೋಪಿಗಳ ವಿಚಾರಣೆ ವೇಳೆ ನಾಗರಿಕರಿಗೆ ಸಾಲ ನೀಡುವ ವೇಳೆ ಅವರ ಗೌಪ್ಯ ಮಾಹಿತಿ ಸಂಗ್ರಹಿಸಿದ್ದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿತ್ತು. ಹಾಗೆಯೇ ಬೆಂಗಳೂರಿನಲ್ಲಿ ಒಂದು ತಿಂಗಳು ಬೀಡು ಬಿಟ್ಟಿದ್ದ ಚೀನಾ ಕಂಪನಿಗಳ ಇಬ್ಬರು ದೂತರು, ತಾವು ಸ್ಥಳೀಯ ಉದ್ದಿಮೆದಾರರು ಎಂದು ಬಿಂಬಿಸಿಕೊಳ್ಳಲು ಪ್ಯಾನ್‌ ಕಾರ್ಡ್‌ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ನಾಗರಿಕರ ಗೌಪ್ಯ ಮಾಹಿತಿ ಕದ್ದಿರುವ ವಿಷಯ ತಿಳಿದ ಕೇಂದ್ರ ಗುಪ್ತದಳವು, ಚೀನಾ ಕಂಪನಿಗಳ ಅಧಿಕಾರಿಗಳ ಬೆನ್ನತ್ತಿದ್ದರು. ಇನ್ನೊಂದೆಡೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರಗಳು ಸಹ ನೆರೆಯ ಶತ್ರು ದೇಶದ ದೂತರ ಬೇಟೆಗಿಳಿದಿದ್ದವು. ಈ ಎಲ್ಲ ರಾಜ್ಯಗಳ ತನಿಖೆ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ಈಗ ಚೀನಿ ಕಂಪನಿಗಳ ಹಣಕಾಸು ಜಾಲದ ಶೋಧನೆಗೆ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಸೂಚಿಸಿದೆ. ಅಂತೆಯೇ ಈಗ ಇ.ಡಿ. ಚೀನಿ ಕಂಪನಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.

ಇ.ಡಿ. ತನಿಖೆ ಏಕೆ?:  ಚೀನಿ ಕಂಪನಿಗಳು ಸಾಲದ ಹೆಸರಿನಲ್ಲಿ ನಡೆಸಿರುವ ವಂಚನೆ ಕೃತ್ಯದ ಜಾಲವು ನಾಲ್ಕು ರಾಜ್ಯಗಳಿಗೆ ವಿಸ್ತರಿಸಿದೆ. ಈ ವಂಚನೆ ಕೃತ್ಯದ ಮಾದರಿ ಒಂದೇ ರೀತಿಯಾಗಿದ್ದರೂ ಬೇರೆ ಬೇರೆ ಕಂಪನಿಗಳ ಹೆಸರಿನಲ್ಲಿ ಕೃತ್ಯ ಎಸಗಲಾಗಿದೆ. ಹೀಗಾಗಿ ರಾಜ್ಯ ಮಟ್ಟದ ತನಿಖಾ ಸಂಸ್ಥೆಗಳಿಗೆ ಸರಹದ್ದು ಸೇರಿದಂತೆ ತಾಂತ್ರಿಕ ಸಮಸ್ಯೆ ಎದುರಾಗಬಹುದು. ಅದಕ್ಕಿಂತ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಅಪರಾಧ ಆಗಿರುವ ಕಾರಣ ಇ.ಡಿ. ಈಗ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಡಿಜಿಟಲ್ ಇಂಡಿಯಾ ಸೇಲ್; ಗಣರಾಜ್ಯೋತ್ಸವಕ್ಕೆ ರಿಲಾಯನ್ಸ್‌ನಿಂದ ಭರ್ಜರಿ ಆಫರ್!

ಕಳೆದ ವಾರ ಸಿಐಡಿಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದ ಇ.ಡಿ. ಅಧಿಕಾರಿಗಳು, ಚೀನಿ ಲೋನ್‌ ಕಂಪನಿಗಳ ತನಿಖೆ ಕುರಿತು ಮಾಹಿತಿ ಪಡೆದಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ, ಸಾಲ ನೀಡಿಕೆಯ ಹಿಂದಿರುವ ಆರ್ಥಿಕ ಕೇಂದ್ರ ಹಾಗೂ ವಿದೇಶಿ ಬಂಡವಾಳ ಹೂಡಿಕೆ ನಿಯಮಾವಳಿ ಉಲ್ಲಂಘನೆ ಹೀಗೆ ಪ್ರತಿಯೊಂದು ಅಂಶವನ್ನು ಆಧರಿಸಿ ಇ.ಡಿ. ತನಿಖೆ ಶುರು ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಟ್‌ ಕಾಯಿನ್‌ಗಳಾಗಿ ಪರಿವರ್ತನೆ

ಸಾಲ ಹೆಸರಿನಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಿ ನೂರಾರು ಕೋಟಿ ಆದಾಯವನ್ನು ಚೀನಾ ಕಂಪನಿಗಳು ಸಂಪಾದಿಸಿವೆ. ಆದರೆ ಈ ಲಾಭವನ್ನು ಬಿಟ್‌ ಕಾಯಿನ್‌ಗಳಾಗಿ ಪರಿವರ್ತಿಸಿಕೊಂಡು ಆ ಕಂಪನಿಗಳು ಸ್ವದೇಶದ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಗಳ ತನಿಖೆ ಕತೆಯೇನು?

ಚೀನಿ ಲೋನ್‌ ಕಂಪನಿಗಳ ವಿರುದ್ಧ ರಾಜ್ಯ ತನಿಖಾ ಸಂಸ್ಥೆಗಳ ತನಿಖೆ ಸಹ ಮುಂದುವರೆಯಲಿದೆ. ತಾವು ಬಂಧಿಸಿರುವ ಆರೋಪಿಗಳ ಬಗ್ಗೆ ಅವು ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಸಲಿವೆ. ಆದರೆ ಹಣಕಾಸು ವ್ಯವಹಾರದ ಬಗ್ಗೆ ಸಮಗ್ರ ತನಿಖೆಯನ್ನು ಇ.ಡಿ. ನಡೆಸಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಡಿಗೆ ಮಾಹಿತಿ ನೀಡಿದ್ದೇವೆ

ಚೀನಿ ಲೋನ್‌ ಆ್ಯಪ್‌ಗಳ ವಂಚನೆ ಪ್ರಕರಣದ ಸಂಬಂಧ ಇ.ಡಿ. ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೆರೆಹೊರೆ ರಾಜ್ಯಗಳ ಪೊಲೀಸರಿಗೆ ಕೂಡ ಸಹಕಾರ ನೀಡಿದ್ದೇವೆ.

- ಉಮೇಶ್‌ ಕುಮಾರ್‌, ಎಡಿಜಿಪಿ, ಸಿಐಡಿ

Follow Us:
Download App:
  • android
  • ios