ವಕ್ಫ್‌ ಬೋರ್ಡ್‌ಗಳು ಜಾತ್ಯತೀತ ಸ್ವರೂಪದ ಕಾರ್ಯಗಳನ್ನು ಮಾಡುತ್ತವೆ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಧಾರ್ಮಿಕತೆಗೆ ಸಂಬಂಧಿಸಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.

ನವದೆಹಲಿ: ವಕ್ಫ್‌ ಎನ್ನುವುದು ದಾನವೇ ಹೊರತು, ಇಸ್ಲಾಂನ ಅವಿಭಾಗ್ಯ ಅಂಗ ಅಲ್ಲ. ವಕ್ಫ್‌ ಬೋರ್ಡ್‌ಗಳು ಕೇವಲ ಜಾತ್ಯತೀತ ಸ್ವರೂಪದ ಕಾರ್ಯಗಳನ್ನಷ್ಟೇ ಮಾಡುತ್ತವೆ. ಆದರೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿರ್ವಹಣೆಯು ಸಂಪೂರ್ಣವಾಗಿ ಧಾರ್ಮಿಕತೆಗೆ ಸಂಬಂಧಿಸಿದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ವಾದಿಸಿದೆ.

ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಆಗಸ್ಟಿನ್‌ ಜಾರ್ಜ್‌ ಮಸಿಹ ಅವರ ಮುಂದೆ ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಬುಧವಾರ ಬಲವಾಗಿ ಸಮರ್ಥಿಸಿಕೊಂಡಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ವಕ್ಫ್‌ ಎನ್ನುವುದು ಇಸ್ಲಾಮಿಕ್‌ ಪರಿಕಲ್ಪನೆ. ಆದರೆ ಅದು ಇಸ್ಲಾಮಿನ ಅವಿಭಾಜ್ಯ ಆಚರಣೆ ಅಲ್ಲ. ದಾನದ ಭಾಗ ಅಷ್ಟೆ. ದಾನದ ಪರಿಕಲ್ಪನೆ ಕ್ರಿಶ್ಚಿಯನ್‌, ಹಿಂದೂ, ಸಿಖ್ಖರ್‌ ಹೀಗೆ ಎಲ್ಲಾ ಧರ್ಮದಲ್ಲೂ ಇದೆ ಎಂದು ನ್ಯಾಯಾಲಯದ ತೀರ್ಪುಗಳು ಹೇಳುತ್ತವೆ ಎಂದು ಮೆಹ್ತಾ ವಾದಿಸಿದರು.

ಹಿಂದೂ ಧಾರ್ಮಿಕ ಎಂಡೋಮೆಂಟ್‌ಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿವೆ. ಆದರೆ, ವಕ್ಫ್‌ ಎಂಬುದು ಶಾಲೆಗಳು, ಮದ್ರಸಾಗಳು, ಧರ್ಮಶಾಲೆಗಳಂಥ ಜಾತ್ಯತೀತ ಸಂಸ್ಥೆಗಳ ಸ್ವರೂಪ ಹೊಂದಿದೆ ಎಂದು ತಿಳಿಸಿದರು.

ಇನ್ನು ವಕ್ಫ್‌ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರನ್ನು ನೇಮಿಸುವ ಕ್ರಮದ ಕುರಿತೂ ಸ್ಪಷ್ಟನೆ ನೀಡಿದ ಮೆಹ್ತಾ ಅವರು, ಇಬ್ಬರು ಮುಸ್ಲಿಮರೇತರರಿದ್ದರೆ ಏನಾದರೂ ಬದಲಾವಣೆ ಆಗುತ್ತದೆಯೇ? ವಕ್ಫ್‌ ಮಂಡಳಿ ಯಾವುದೇ ಧಾರ್ಮಿಕ ಚಟುವಟಿಕೆ ನೋಡಿಕೊಳ್ಳುವುದಿಲ್ಲ. ಹೀಗಾಗಿ ವಕ್ಫ್‌ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರ ನೇಮಕ ಧರ್ಮದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಜಾಗದ ಮೇಲೆ ಯಾರೂ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ. ವಕ್ಫ್‌ ಬೈ ಯೂಸರ್‌(ವಕ್ಫ್‌ ಹಲವು ವರ್ಷಗಳಿಂದ ಸರ್ಕಾರಿ ಜಮೀನನ್ನು ನಿರ್ವಹಿಸುತ್ತಿದ್ದರೆ ಆ ಜಾಗ ವಕ್ಫ್‌ ಪಾಲಾಗುತ್ತದೆ ಎಂಬ ನಿಯಮ)ನಡಿ ಘೋಷಿತ ಜಾಗಗಳನ್ನು ಸರ್ಕಾರ ವಾಪಸ್‌ ಪಡೆಯಬಹುದಾಗಿದೆ ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಧ್ಯಂತರ ಆದೇಶದ ಅಂಶಕ್ಕೆ ಸಂಬಂಧಿಸಿದಂತೆ ಕೋರ್ಟ್ 3 ವಿಷಯಗಳನ್ನು ನಿರ್ಧರಿಸಿದೆ ಮತ್ತು ಕೇಂದ್ರ ಸರ್ಕಾರವು ಆ 3 ವಿಷಯಗಳ ಕುರಿತು ತನ್ನ ಉತ್ತರವನ್ನು ಸಲ್ಲಿಸಿದೆ ಎಂದು ಕೋರ್ಟ್‌ಗೆ ತಿಳಿಸಿದರು.ವಕ್ಫ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ ಹಾಜರಾದ ವಕೀಲ ಕಪಿಲ್ ಸಿಬಲ್ ‘ಈ ಕಾನೂನು ವಕ್ಫ್ ರಕ್ಷಣೆಗಾಗಿ ಇದೆ ಎಂದು ಹೇಳಲಾಗುತ್ತಿದೆ, ಆದರೆ ಅದರ ಉದ್ದೇಶ ವಕ್ಫ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿದೆ. ಯಾವುದೇ ಕಾರ್ಯವಿಧಾನವನ್ನು ಅನುಸರಿಸದೆ ವಕ್ಫ್ ಆಸ್ತಿಯನ್ನು ವಶಪಡಿಸಿಕೊಳ್ಳಬಹುದಾದ ರೀತಿಯಲ್ಲಿ ಕಾನೂನನ್ನು ಮಾಡಲಾಗಿದೆ’ ಎಂದು ಸಿಬಲ್ ವಾದಿಸಿದರು.

ಈ ವೇಳೆ, ಸಂಸತ್ತು ಅಂಗೀಕರಿಸಿದ ಕಾನೂನುಗಳು ಸಾಂವಿಧಾನಿಕವೆಂದು ಭಾವಿಸಲಾಗಿದ್ದು, ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ಅದರಲ್ಲಿ ಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಬಂಗಾಳ ವಕ್ಫ್‌ ಹಿಂಸೆಗೆ ಹಿಂದೂಗಳೇ ಗುರಿ: ವರದಿ
ಕೋಲ್ಕತಾ: ‘ಕಳೆದ ತಿಂಗಳು ಪ.ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ವಕ್ಫ್‌ ಕಾಯ್ದೆ ವಿರೋಧಿ ಹಿಂಸಾಚಾರದಲ್ಲಿ ಬಂಗಾಳದ ಆಡಳಿತಾರೂಢ ಟಿಎಂಸಿ ನಾಯಕರೊಬ್ಬರು ಭಾಗಿಯಾಗಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗಿದೆ. ಇದನ್ನು ನೋಡಿಯೂ ಪೊಲೀಸರು ಸಂಪೂರ್ಣ ನಿಷ್ಕ್ರಿಯರಾಗಿದ್ದರು’ ಎಂದು ಕಲ್ಕತ್ತಾ ಹೈಕೋರ್ಟ್ ರಚಿಸಿದ ತನಿಖಾ ಸಮಿತಿಯ ವರದಿ ತಿಳಿಸಿದೆ.‘ದಾಳಿಯಲ್ಲಿ ಹಿಂದೂಗಳನ್ನೇ ಗುರಿಯಾಗಿಸಲಾಗಿತ್ತು. ಹಿಂಸಾಚಾರವನ್ನು ಟಿಎಂಸಿ ಪಕ್ಷದವನಾದ ಸ್ಥಳೀಯ ಕೌನ್ಸಿಲರ್ ಮೆಹಬೂಬ್ ಆಲಂ ನಿರ್ದೇಶಿಸಿದ್ದ. ಜನರು ಸಹಾಯಕ್ಕಾಗಿ ಕರೆ ಮಾಡಿದರೂ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರು. ಅಂಗಡಿ ಮತ್ತು ಮಾಲ್‌ಗಳಿಗೆ ಬೆಂಕಿ ಹಚ್ಚಿ, ಅಪಾರ ಪ್ರಮಾಣದಲ್ಲಿ ಲೂಟಿ ಮಾಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.