ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಿಸಿದರೆ ಮಿಕ್ಕ ಕೇಂದ್ರ ಸರ್ಕಾರಿ ನೌಕರರು ಕೂಡ ಇದೇ ಬೇಡಿಕೆ ಇರಿಸುತ್ತಾರೆ. ಆಗ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ ಇಲಾಖೆ 

ನವದೆಹಲಿ(ಡಿ.26): ಉನ್ನತ ಹಂತದ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನಡುವೆ ಸಂಘರ್ಷ ತಾರಕಕ್ಕೆ ಏರಿರುವ ಹಂತದಲ್ಲೇ, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಕೇಂದ್ರ ಕಾನೂನು ಸಚಿವಾಲಯ ವಿರೋಧ ವ್ಯಕ್ತಪಡಿಸಿದೆ. ಕಾನೂನು ಸಚಿವಾಲಯವು ಸಂಸದೀಯ ಸಮಿತಿಗೆ ಸಲ್ಲಿಸಿರುವ ಈ ಅಭಿಪ್ರಾಯವು ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗುವ ಕಳವಳ ವ್ಯಕ್ತವಾಗಿದೆ.

‘ಕೋರ್ಟ್‌ಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸಲು ನಿವೃತ್ತಿ ವಯೋಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆ ತರವಲ್ಲ. ನ್ಯಾಯಾಂಗದ ಇತರ ಸುಧಾರಣಾ ಕ್ರಮಗಳ ಜತೆ ನಿವೃತ್ತಿ ವಯಸ್ಸು ಏರಿಕೆಯನ್ನು ಪರಿಗಣಿಸಬಾರದು. ನಿವೃತ್ತಿ ವಯಸ್ಸು ಹೆಚ್ಚಳದಿಂದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಜಡ್ಜ್‌ಗಳಿಗೆ ಅನುಕೂಲವಾಗಬಹುದು’ ಎಂದು ಅದು ಎಚ್ಚರಿಸಿದೆ.

ಜಡ್ಜ್‌ ನೇಮಕ ವಿಳಂಬ: ಕೇಂದ್ರದ ನಡೆಗೆ ಮತ್ತೆ ಸುಪ್ರೀಂ ಕಿಡಿ

ಅಲ್ಲದೆ, ‘ವಯಸ್ಸು ಹೆಚ್ಚಳದಿಂದ ನಿವೃತ್ತ ನ್ಯಾಯಾಧೀಶರನ್ನೇ ಅವಲಂಬಿಸಿರುವ ನ್ಯಾಯಾಧಿಕರಣಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಟ್ರಿಬ್ಯುನಲ್‌ಗಳಿಗೆ ನ್ಯಾಯಾಧೀಶರು ಸಿಗುವುದು ವಿಳಂಬವಾಗುತ್ತದೆ’ ಎಂದು ಅದು ಹೇಳಿದೆ.
‘ಇನ್ನು ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಿಸಿದರೆ ಮಿಕ್ಕ ಕೇಂದ್ರ ಸರ್ಕಾರಿ ನೌಕರರು ಕೂಡ ಇದೇ ಬೇಡಿಕೆ ಇರಿಸುತ್ತಾರೆ. ಆಗ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಇಲಾಖೆ ಎಚ್ಚರಿಸಿದೆ.

ಸದ್ಯ ಸುಪ್ರೀಂ ಕೋರ್ಟ್‌ ಜಡ್ಜ್‌ಗಳ ನಿವೃತ್ತಿ ವಯಸ್ಸು 65 ಇದ್ದರೆ, ಹೈಕೋರ್ಟ್‌ ಜಡ್ಜ್‌ಗಳ ವಯಸ್ಸು 62 ಇದೆ. 2010ರಲ್ಲೇ ಹೈಕೋರ್ಚ್‌ ಜಡ್ಜ್‌ಗಳ ನಿವೃತ್ತಿ ವಯಸ್ಸನ್ನು 65ಕ್ಕೆ ಏರಿಸಲು ಸಂಸತ್ತು ಯತ್ನಿಸಿದರೂ ಫಲ ಸಿಕ್ಕಿರಲಿಲ್ಲ. ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಕೂಡ ‘ಜಡ್ಜ್‌ಗಳ ನಿವೃತ್ತಿ ವಯಸ್ಸು ಏರಿಸುವ ಪ್ರಸ್ತಾಪವಿಲ್ಲ’ ಎಂದು ಸಂಸತ್ತಿಗೆ ಹೇಳಿದ್ದರು.