ಈರುಳ್ಳಿ ದರ ನಿಯಂತ್ರಣಕ್ಕಾಗಿ ರಫ್ತಿನ ಮೇಲೆ ಸುಂಕ ಹೇರಲಾಗಿದೆ. ಆದರೆ ಇದರಿಂದ ರೈತರಿಗೆ ನಷ್ಟವಾಗದು. ಕೇಂದ್ರ ಸರ್ಕಾರ 1 ಕ್ವಿಂಟಾಲ್‌ಗೆ ಐತಿಹಾಸಿಕ 2410 ರು. ನೀಡಿ ಈರುಳ್ಳಿ ಖರೀದಿಸಲು ನಿರ್ಧರಸಿದೆ. ರಫ್ತು ಮಾಡಿದರೆ ರೈತರಿಗೆ 1 ಕ್ವಿಂಟಲ್‌ಗೆ ಸರಾಸರಿ 1800-1900 ರು. ಸಿಗಬಹುದು. ಆದರೆ ಅದಕ್ಕಿಂತ ಹೆಚ್ಚು ದರ ನೀಡಲು ಕೇಂದ್ರ ನಿರ್ಧರಿಸಿದೆ ಎಂದ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪೀಯೂಶ್‌ ಗೋಯಲ್‌ 

ನವದೆಹಲಿ/ಮುಂಬೈ(ಆ.23):  ಏರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ರಫ್ತಿನ ಮೇಲೆ ಶೇ.40ರಷ್ಟುಸುಂಕ ಹೇರಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ರೈತರು ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಾಸಲಗಾಂವ್‌ನಲ್ಲಿ ಸತತ 2ನೇ ದಿನವೂ ಮಾರಾಟ ಸ್ಥಗಿತಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಈರುಳ್ಳಿಯನ್ನು 1 ಕ್ವಿಂಟಲ್‌ಗೆ ‘ಐತಿಹಾಸಿಕ’ 2,410 ರು. ದರ ನೀಡಿ ಖರೀದಿಸಲು ಕೇಂದ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ ಮುಂಡೆ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪೀಯೂಶ್‌ ಗೋಯಲ್‌, ‘ಈರುಳ್ಳಿ ದರ ನಿಯಂತ್ರಣಕ್ಕಾಗಿ ರಫ್ತಿನ ಮೇಲೆ ಸುಂಕ ಹೇರಲಾಗಿದೆ. ಆದರೆ ಇದರಿಂದ ರೈತರಿಗೆ ನಷ್ಟವಾಗದು. ಕೇಂದ್ರ ಸರ್ಕಾರ 1 ಕ್ವಿಂಟಾಲ್‌ಗೆ ಐತಿಹಾಸಿಕ 2410 ರು. ನೀಡಿ ಈರುಳ್ಳಿ ಖರೀದಿಸಲು ನಿರ್ಧರಸಿದೆ. ರಫ್ತು ಮಾಡಿದರೆ ರೈತರಿಗೆ 1 ಕ್ವಿಂಟಲ್‌ಗೆ ಸರಾಸರಿ 1800-1900 ರು. ಸಿಗಬಹುದು. ಆದರೆ ಅದಕ್ಕಿಂತ ಹೆಚ್ಚು ದರ ನೀಡಲು ಕೇಂದ್ರ ನಿರ್ಧರಿಸಿದೆ’ ಎಂದರು.

ಈರುಳ್ಳಿ ರಫ್ತಿಗೆ ಶೇ.40 ಸುಂಕ: ಮಹಾ ರೈತರು, ವರ್ತಕರ ತೀವ್ರ ಆಕ್ರೋಶ

‘ಈರುಳ್ಳಿ ಖರೀದಿಸುವಂತೆ ಕೇಂದ್ರದ ಎನ್‌ಸಿಸಿಎಫ್‌ ಹಾಗೂ ನ್ಯಾಫೆಡ್‌ಗೆ ನಾವು ಸೂಚಿಸಿದ್ದೇವೆ. ರೈತರು ವಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೇ ಲಾಸಲಗಾಂವ್‌ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಬಂದ್‌ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಮನವಿ ಮಾಡಿದರು.