ನವದೆಹಲಿ[ಜ.10]: ಪೌರತ್ವ ಮಸೂದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಬಗ್ಗೆ ದೇಶವ್ಯಾಪಿ ಹೋರಾಟ ನಡೆಯುತ್ತಿರುವ ಹಂತದಲ್ಲೇ, ಕೇಂದ್ರ ಸರ್ಕಾರ ಏ.1ರಿಂದ ದೇಶವ್ಯಾಪಿ ಮನೆಗಣತಿಗೆ ಗುರುವಾರ ಅಧಿಸೂಚನೆ ಹೊರಡಿಸಿದೆ. ಮನೆಗಣತಿ ವೇಳೆ ಮನೆಮನೆಗೆ ಆಗಮಿಸಲಿರುವ ಗಣತಿದಾರರು, ಮನೆಯ ಯಜಮಾನರ ಮೊಬೈಲ್‌ ಸೇರಿದಂತೆ ಒಟ್ಟು 31 ಬಗೆಯ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ.

ಈ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿರುವ ರಿಜಿಸ್ಟ್ರಾರ್‌ ಜನರಲ್‌ ಮತ್ತು ಗಣತಿ ಆಯುಕ್ತರು, ಗಣತಿ ಅಧಿಕಾರಿಗಳು ಏ.1ರಿಂದ ಸೆ.30ರವರೆಗೆ ದೇಶವ್ಯಾಪಿ ಮನೆಗಣತಿ ಮಾಡಲಿದ್ದಾರೆ. ಈ ವೇಳೆ ಅವರಿಗೆ ಪ್ರತಿ ಮನೆಯಿಂದ 31 ಬಗೆಯ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಏನೇನು ಮಾಹಿತಿ?:

2021ರಲ್ಲಿ ನಡೆಸಲು ಉದ್ದೇಶಿಸಿರುವ ಜನಗಣತಿಗೆ ಪೂರ್ವವಾಗಿ ಸರ್ಕಾರ ಈ ಮನೆಗಣತಿ ನಡೆಸುತ್ತಿದೆ. ಇದರಲ್ಲಿ ಮನೆಯ ಯಜಮಾನರ ಮೊಬೈಲ್‌ ನಂಬರ್‌ ಸೇರಿದಂತೆ ವಿವಿಧ ರೀತಿಯ ಮಾಹಿತಿ ಸಂಗ್ರಹಿಸಲಾಗುವುದು. ಜನಗಣತಿ ಸಂಬಂಧ ಮಾಹಿತಿ ಹಂಚಿಕೊಳ್ಳಲು ಮಾತ್ರ ಈ ಮೊಬೈಲ್‌ ನಂಬರ್‌ ಉಪಯೋಗಿಸಿಕೊಳ್ಳಲಾಗುತ್ತದೆ. ಉಳಿದಂತೆ ಯಾವುದೇ ವಿಷಯಕ್ಕೆ ನಂಬರ್‌ ಬಳಸಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಮನೆಗಣತಿಯ ಜೊತೆಜೊತೆಗೇ 2020ರ ಸೆಪ್ಟೆಂಬರ್‌ ವೇಳೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಅನ್ನೂ ಪೂರ್ಣಗೊಳಿಸಲು ನಿರ್ಧರಿಸಿದೆ.

ಏನೇನು ಸಂಗ್ರಹ?

ಮನೆ ಮಾಲಿಕನ ಮೊಬೈಲ್‌ ನಂಬರ್‌, ಮನೆಯಲ್ಲಿನ ಶೌಚಾಲಯ, ಸ್ನಾನ ಗೃಹ, ತ್ಯಾಜ್ಯ ನಿರ್ವಹಣೆ, ಟಿವಿ, ಮೊಬೈಲ್‌, ಪೋನ್‌, ಇಂಟರ್ನೆಟ್‌, ರೆಡಿಯೋ, ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಸೈಕಲ್‌, ಸ್ಕೂಟರ್‌, ಮೊಪೆಡ್‌, ಬೈಕ್‌ ಹಾಗೂ ಕಾರ್‌ ಸೇರಿ ವಾಹನಗಳ ಸಂಖ್ಯೆ, ಮನೆ ನಂಬರ್‌, ಮನೆಯಲ್ಲಿರುವ ಸದಸ್ಯರ ಸಂಖ್ಯೆ, ವಿವಾಹವಾದವರ ಸಂಖ್ಯೆ, ಜಾತಿ, ವಿವಾಹವಾದ ಸದಸ್ಯರ ಸಂಖ್ಯೆ, ಕುಡಿವ ನೀರಿನ ಮೂಲ, ಅಡುಗೆ ಮನೆ, ಗ್ಯಾಸ್‌ ಸೌಲಭ್ಯ ಮುಂತಾದವುಗಳ ಬಗ್ಗೆ, ಮನೆ ವಿಧ, ಮನೆ ನೆಲದ ವಿಧ, ಮನೆಯ ಸ್ಥಿತಿ, ವಿದ್ಯುತ್‌ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹ