Karnataka Internal Reservation Row ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ತಡೆ! ಸಿಎಂ ಸಿದ್ದರಾಮಯ್ಯ ನೇತೃತ್ವದ ದಲಿತ ಸಚಿವರ ಸಭೆಯ 3 ಪ್ರಮುಖ ತೀರ್ಮಾನಗಳೇನು? ನೇಮಕಾತಿ ಪ್ರಕ್ರಿಯೆ ಯಾವಾಗ ಶುರು? ತಿಳಿಯಲು ಓದಿ.

ಸಿಎಂ ನೇತೃತ್ವದಲ್ಲಿ ದಲಿತ ಸಚಿವರ ತುರ್ತು ಸಭೆ

ಬೆಂಗಳೂರು (ಫೆ.26): ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಒಳಮೀಸಲಾತಿ ವಿಧೇಯಕಕ್ಕೆ ರಾಜಭವನದಲ್ಲಿ ತಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿತ್ತು.

ಸಭೆಯಲ್ಲಿ ಮೂರು ಪ್ರಮುಖ ತೀರ್ಮಾನ

ಸಭೆಯ ಅಂತ್ಯದಲ್ಲಿ ಸರ್ಕಾರ ಮೂರು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಒಳಮೀಸಲಾತಿ ವಿಧೇಯಕಕ್ಕೆ ಕೂಡಲೇ ಅಂಕಿತ ಹಾಕುವಂತೆ ಕೋರಲು ರಾಜ್ಯಪಾಲರ ಬಳಿ ಸಚಿವರ ನಿಯೋಗ ತೆರಳಲು ನಿರ್ಧರಿಸಲಾಯಿತು. ಎರಡನೆಯದಾಗಿ, ಪ್ರಸ್ತುತ ನ್ಯಾಯಾಲಯದಲ್ಲಿರುವ ಒಳಮೀಸಲಾತಿ ಸಂಬಂಧಿತ ಕಾನೂನು ತೊಡಕುಗಳನ್ನು ನಿವಾರಿಸುವುದು ಮತ್ತು ಮೂರನೆಯದಾಗಿ, ನೇಮಕಾತಿ ಪ್ರಕ್ರಿಯೆಯನ್ನು ಹಂತ ಹಂತವಾಗಿ ಶೀಘ್ರವೇ ಆರಂಭಿಸಲು ತೀರ್ಮಾನಿಸಲಾಗಿದೆ.

ಸರ್ಕಾರಕ್ಕೆ ವಾಪಸ್ ಬಂದ ಒಳಮೀಸಲಾತಿ ವಿಧೇಯಕ

ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ಹಲವು ಸ್ಪಷ್ಟನೆಗಳನ್ನು ಕೋರಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯ ಆಶಯಕ್ಕೆ ತಾತ್ಕಾಲಿಕ ಧಕ್ಕೆ ಉಂಟಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ. 6, 6 ಮತ್ತು 5ರ ಅನುಪಾತದಲ್ಲಿ ಕೋಟಾ ನಿಗದಿಪಡಿಸಲಾಗಿತ್ತು, ಆದರೆ ರಾಜ್ಯಪಾಲರು ಜನವರಿ 9 ರಂದೇ ಈ ಫೈಲ್ ವಾಪಸ್ ಕಳುಹಿಸಿದ್ದಾರೆ.

ರಾಜ್ಯಪಾಲರ ಪ್ರಮುಖ ಆಕ್ಷೇಪಗಳು ಏನು?

ರಾಜ್ಯಪಾಲರು ಪ್ರಮುಖವಾಗಿ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಬಳಸಲಾದ ದತ್ತಾಂಶಗಳ ನೈಜತೆಯ ಬಗ್ಗೆ ಪ್ರಶ್ನಿಸಿದ್ದಾರೆ. ನಾಗಮೋಹನ್ ದಾಸ್ ಆಯೋಗದ ಕಾರ್ಯವ್ಯಾಪ್ತಿ ಹಾಗೂ ಜಾತಿಗಳ ನಡುವಿನ ಸಮಾನ ಗುಣ ಗುರುತಿಸುವ ಮಾನದಂಡಗಳ ಬಗ್ಗೆಯೂ ವಿವರಣೆ ಕೇಳಿದ್ದಾರೆ. ವಿಶೇಷವಾಗಿ, ಒಂದೇ ರೀತಿಯ ಗುಣಲಕ್ಷಣವಿರುವ ಸಮುದಾಯಗಳು ಬೇರೆ ಬೇರೆ ಗುಂಪುಗಳಲ್ಲಿ ನಮೂದಾಗಿರುವುದು ಮತ್ತು ವಿಶ್ವವಿದ್ಯಾಲಯಗಳ ನೇಮಕಾತಿಯ ರೋಸ್ಟರ್ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ವಿಳಂಬದ ಆತಂಕ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಸಭೆಯ ನಂತರ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಒಳಮೀಸಲಾತಿ ಬಿಲ್ ಬಾಕಿ ಇರುವ ವಿಚಾರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದಾಗಿ ತಿಳಿಸಿದರು. 'ಯುವಕರಿಗೆ ನೇಮಕಾತಿಯಲ್ಲಿ ಅನ್ಯಾಯವಾಗಬಾರದು ಎಂಬುದು ನಮ್ಮ ಉದ್ದೇಶ. ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಕೆಲವು ಕಾನೂನಾತ್ಮಕ ಪ್ರಶ್ನೆಗಳಿದ್ದು, ಅದನ್ನು ಲೀಗಲ್ ಟೀಮ್ ಜೊತೆ ಚರ್ಚಿಸಿ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ' ಎಂದು ಖರ್ಗೆ ಮಾಹಿತಿ ನೀಡಿದರು.

YouTube video player