Asianet Suvarna News Asianet Suvarna News

ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ!

ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ| 20 ವಾರ ಮೀರಿದ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅನುಮತಿ ಕಡ್ಡಾಯ| ಭ್ರೂಣಕ್ಕೆ ತೊಂದರೆ ಇದ್ದರೆ 24 ವಾರದ ಬಳಿಕವೂ ಗರ್ಭಪಾತ ಅವಕಾಶ| ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧಾರ

Cabinet okays bill to raise upper limit for abortions to 24 weeks Name of a woman will not be revealed
Author
Bangalore, First Published Jan 30, 2020, 11:26 AM IST

ನವದೆಹಲಿ[ಜ.30]: ಅತ್ಯಾಚಾರ ಸಂತ್ರಸ್ತರು, ಅಂಗವಿಕಲರಂತಹ ವಿಶೇಷ ಮಹಿಳೆಯರ ಪ್ರಕರಣಗಳಲ್ಲಿ 24 ವಾರದವರೆಗೂ ಗರ್ಭಪಾತಕ್ಕೆ ಅವಕಾಶ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಗರ್ಭಪಾತಕ್ಕೆ ಒಳಗಾದವರ ಹೆಸರನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಿದೆ.

20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಲು ಇಚ್ಛಿಸುವವರಿಗೆ ಒಬ್ಬ ವೈದ್ಯರ ಶಿಫಾರಸು ಕಡ್ಡಾಯ. 20 ವಾರಕ್ಕಿಂತ ಹೆಚ್ಚು ಅವಧಿಯ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದರೆ ಇಬ್ಬರು ವೈದ್ಯರ ಅಭಿಪ್ರಾಯ ಪಡೆಯುವುದು ಅಗತ್ಯ. ಇವರಲ್ಲಿ ಒಬ್ಬ ಸರ್ಕಾರಿ ವೈದ್ಯರು ಇರಬೇಕು ಎಂದೂ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ.

ಗರ್ಭಪಾತ ಅವಧಿ 24 ವಾರ ವಿಸ್ತರಿಸಿದ ಕೇಂದ್ರ ಸರ್ಕಾರ!

ಗರ್ಭಪಾತ ಮಾಡಿಸಿಕೊಂಡ ಮಹಿಳೆಯರ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಅವರ ಹೆಸರು ಕಾನೂನಿನಲ್ಲಿ ಉಲ್ಲೇಖಿಸಲಾಗಿರುವ ಸಂಬಂಧಿತ ವ್ಯಕ್ತಿಗೆ ಮಾತ್ರ ಗೊತ್ತಾಗಬೇಕು. ಗರ್ಭಾವಸ್ಥೆ ವೇಳೆ ಮಹಿಳೆಯರ ಭ್ರೂಣದಲ್ಲಿ ತೊಂದರೆ ಇದ್ದು, ಅದು ಮಗುವಿನ ಬೆಳವಣಿಗೆಯ ತೊಂದರೆಗೆ ಕಾರಣವಾಗುತ್ತಿದ್ದರೆ ಅಂಥವರಿಗೆ ಈ 24 ವಾರದ ಗರಿಷ್ಠ ಮಿತಿ ನಿಯಮ ಅನ್ವಯಿಸುವುದಿಲ್ಲ. ಇದಕ್ಕೆ ವೈದ್ಯಕೀಯ ಮಂಡಳಿಯ ಅನುಮತಿ ಅತ್ಯಗತ್ಯ ಎಂದು ತಿಳಿಸಿದೆ.

4 ಸಂದರ್ಭದಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶವಿದೆ

ಭಾರತದಲ್ಲಿ ಅಕ್ರಮವಾಗಿ ಗರ್ಭಪಾತ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ 1971ರಲ್ಲಿ ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರಗ್ನೆನ್ಸಿ ಆ್ಯಕ್ಟ್ (ಗರ್ಭಪಾತ ತಡೆ ಕಾಯ್ದೆ)ಯನ್ನು ಜಾರಿಗೊಳಿಸಿದೆ. ಮಹಿಳೆಗೆ 18 ವರ್ಷ ತುಂಬಿದ್ದರೆ ಗರ್ಭಪಾತ ಮಾಡಿಸಿಕೊಳ್ಳಲು ಕುಟುಂಬದ ಅಥವಾ ಪತಿಯ ಅನುಮತಿಯನ್ನು ಪಡೆಯಬೇಕಾದ ಅಗತ್ಯವಿಲ್ಲ. ಈ ಕಾಯ್ದೆಯಡಿ 4 ಸಂದರ್ಭಗಳಲ್ಲಿ ಮಾತ್ರ ಗರ್ಭಪಾತಕ್ಕೆ ಅವಕಾಶವಿದೆ.

1. ಒಂದು ವೇಳೆ ಗರ್ಭ ಧರಿಸುವುದು ತಾಯಿ ಜೀವಕ್ಕೇ, ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯ ಎನಿಸಿದಾಗ

2. ಭ್ರೂಣ ಅತಿ ಅಸಹಜ ಸ್ಥಿತಿಯಲ್ಲಿ ಇದ್ದಾಗ

3. ಗರ್ಭ ನಿರೋಧಕ ಕ್ರಮಗಳು ವಿಫಲವಾಗಿದ್ದರೆ (ಈ ನಿಯಮ ವಿವಾಹಿತ ಮಹಿಳೆಗೆ ಮಾತ್ರ ಅನ್ವಯ)

4. ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಫಲವಾಗಿ ಗರ್ಭ ಧರಿಸಿದ್ದರೆ

ಅಪರಾಧಿ ನಾನಲ್ಲ; ಗರ್ಭಪಾತ ನಿರ್ಧಾರದ ಬಗ್ಗೆ ಮಹಿಳೆಗಿಲ್ಲ ಪಶ್ಚತ್ತಾಪ

2 ರೀತಿ ಗರ್ಭಪಾತ

1. ವೈದ್ಯಕೀಯ ಗರ್ಭಪಾತ: ಭ್ರೂಣ ಏಳು ವಾರಕ್ಕಿಂತ ಕಡಿಮೆ ಅವಧಿಯದ್ದಾಗಿದ್ದರೆ ಅದಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಔಷಧದ ಮೂಲಕ ಗರ್ಭಪಾತ ಮಾಡಬಹುದು.

2. ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಪಾತ: ಒಂದು ವೇಳೆ ಭ್ರೂಣ ಏಳು ವಾರಕ್ಕಿಂತಲೂ ಹೆಚ್ಚಿನದಾಗಿದ್ದರೆ ಶಸ್ತ್ರ ಚಿಕಿತ್ಸೆಯ ಮೂಲಕ ಗರ್ಭಪಾತ ನಡೆಸಲು ಅವಕಾಶವಿದೆ.

20 ವಾರಗಳ ಗಡುವು ಏಕೆ?

ಗರ್ಭಧಾರಣೆಯ 20 ವಾರಗಳ ಬಳಿಕ ಮಗುವಿನ ಲಿಂಗವನ್ನು ನಿರ್ಧರಿಸಬಹುದು. ಹೀಗಾಗಿ ಗರ್ಭಪಾತದ ವೇಳೆ ಲಿಂಗವನ್ನು ನಿರ್ಧರಿಸುವುದು ಸಾಧ್ಯವಾಗಬಾರದು ಮತ್ತು ಲಿಂಗದ ಆಧಾರದ ಮೇಲೆ ಗರ್ಭಪಾತ ನಡೆಸಬಾರದು ಎಂಬ ಕಾರಣಕ್ಕೆ 20 ವಾರಗಳ ಗಡುವು ವಿಧಿಸಲಾಗಿತ್ತು. ಆದರೆ, ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ 20 ವಾರಗಳ ಬಳಿಕವೂ ಕೋರ್ಟ್‌ ಗರ್ಭಪಾತಕ್ಕೆ ಅನುಮತಿ ನೀಡಿರುವ ಪ್ರಕರಣಗಳಿವೆ.

ಭಾರತದಲ್ಲಿ ಗರ್ಭಪಾತಗಳು

1.56 ಕೋಟಿ: ಭಾರತದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಗರ್ಭಪಾತ ಪ್ರಕರಣಗಳು

10 ಮಹಿಳೆ ಸಾವು: ಅಸುರಕ್ಷಿತ ಗರ್ಭಪಾತದಿಂದ ಪ್ರತಿನಿತ್ಯ ಸಾವನ್ನಪ್ಪುತ್ತಿರುವ ಮಹಿಳೆಯರ ಸಂಖ್ಯೆ

Follow Us:
Download App:
  • android
  • ios