ನವದೆಹಲಿ[ಫೆ.27]: ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ-2019ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ತಿದ್ದುಪಡಿ ಮಸೂದೆಯಲ್ಲಿ ರಾಜ್ಯಸಭೆಯ ಆಯ್ಕೆ ಸಮಿತಿ ನೀಡಿದ ಶಿಫಾರಸುಗಳನ್ನು ಸೇರಿಸಲಾಗಿದೆ.

‘ಹತ್ತಿರದ ಬಂಧುಗಳಷ್ಟೇ ಬಾಡಿಗೆ ತಾಯಿಯಾಗಬಹುದು ಎಂದು ಹಿಂದಿನ ಮಸೂದೆಯಲ್ಲಿತ್ತು. ಈಗ ಇದಕ್ಕೆ ತಿದ್ದುಪಡಿ ತರಲಾಗಿದೆ. ಹತ್ತಿರದ ಬಂಧುಗಳಷ್ಟೇ ಅಲ್ಲ ಬೇರೆ ಯಾವುದೇ ಮಹಿಳೆ ಬಾಡಿಗೆ ತಾಯಿ ಆಗಲು ಮುಂದೆ ಬಂದರೆ ಅದಕ್ಕೆ ಅವಕಾಶ ನೀಡಬೇಕು’ ಎಂದು ಸೇರಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್‌ ಹಾಗೂ ಸ್ಮೃತಿ ಇರಾನಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಒಟ್ಟು 15 ಮಹತ್ವದ ಸಲಹೆಗಳನ್ನು ಕೂಡ ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ. ಸಂಸತ್ತಿನ ಇದೇ ಬಜೆಟ್‌ ಅಧಿವೇಶನದಲ್ಲಿ ಮಸೂದೆಯು ಮಂಡನೆಯಾಗಲಿದೆ.

ಮುಖ್ಯಾಂಶಗಳು

- ‘ಹತ್ತಿರದ ಬಂಧುಗಳಷ್ಟೇ ಅಲ್ಲ, ಬೇರೆ ಯಾರಾದರೂ ಬಾಡಿಗೆ ತಾಯಿ ಆಗಲು ಮುಂದೆ ಬಂದರೆ ಅದಕ್ಕೆ ಅವಕಾಶ ನೀಡಬೇಕು

- ಭಾರತದಲ್ಲಿ ಕೇವಲ ಭಾರತೀಯ ದಂಪತಿ ಬಾಡಿಗೆ ತಾಯ್ತನ ಬಯಸಲು ಅರ್ಹರು

- 35ರಿಂದ 45 ವರ್ಷ ವಯಸ್ಸಿನ ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರೂ ಬಾಡಿಗೆ ತಾಯ್ತನದ ಪ್ರಯೋಜನ ಪಡೆಯಬಹುದು

- 5 ವರ್ಷ ಲೈಂಗಿಕ ಕ್ರಿಯೆ ನಡೆಸಿದ ನಂತರವೂ ಮಗು ಆಗದೇ ಇರುವುದು ‘ಬಂಜೆತನ’ ಎಂಬ ವ್ಯಾಖ್ಯಾನವನ್ನು ಮಸೂದೆಯಿಂದ ತೆಗೆದು ಹಾಕಲಾಗಿದೆ

- ಬಾಡಿಗೆ ತಾಯ್ತನ ನಿಯಂತ್ರಿಸಲು ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ; ರಾಜ್ಯ ಮಟ್ಟದಲ್ಲಿ ರಾಜ್ಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪನೆ

- ಬಾಡಿಗೆ ತಾಯಿಯ ಮೇಲಿನ ವಿಮಾ ಅವಧಿ ಈ ಮುಂಚಿನ 16 ತಿಂಗಳ ಬದಲು 36 ತಿಂಗಳಿಗೆ ವಿಸ್ತರಣೆ

- ವಾಣಿಜ್ಯಿಕ ಬಾಡಿಗೆ ತಾಯ್ತನಕ್ಕೆ ನಿಷೇಧ, ನೈತಿಕ ಬಾಡಿಗೆ ತಾಯ್ತನಕ್ಕೆ ಒಪ್ಪಿಗೆ