ನವದೆಹಲಿ(ಡಿ.31): ಕರ್ನಾಟಕದ ತುಮಕೂರು ಹಾಗೂ ಆಂಧ್ರಪ್ರದೇಶದ ಕೃಷ್ಣಪಟ್ಟಣಂಗಳಲ್ಲಿ ಕೈಗಾರಿಕಾ ಕಾರಿಡಾರ್‌ ಜಾಲ (ನೋಡ್‌) ನಿರ್ಮಿಸಲು ಕೇಂದ್ರ ಸರ್ಕಾರ ಬುಧವಾರ ಅಂಗೀಕಾರ ನೀಡಿದೆ. ಇವು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಲಿದ್ದು, ವಿಶ್ವದರ್ಜೆಯ ಔದ್ಯಮಿಕ ಜಾಲಗಳಾಗಿ ಮಾರ್ಪಾಡಾಗಲಿವೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದರನ್ವಯ ತುಮಕೂರಿನಲ್ಲಿ ಕೈಗಾರಿಕಾ ಜಾಲ ನಿರ್ಮಿಸಲು 1,701.81 ಕೋಟಿ ರು. ಹಾಗೂ ಕೃಷ್ಣಪಟ್ಟಣಂಗೆ 2,139.44 ಕೋಟಿ ರು. ಮೀಸಲಿರಿಸಲಾಗುತ್ತದೆ.

ಇನ್ನೊಂದೆಡೆ ಗ್ರೇಟರ್‌ ನೋಯ್ಡಾ ಬಹುವಿಧದ ಸರಕು ಹಾಗೂ ಸಾರಿಗೆ ಹಬ್‌ ಸ್ಥಾಪನೆಗೂ ಅನುಮೋದನೆ ನೀಡಲಾಗಿದ್ದು, ಇದಕ್ಕೆ 3,380 ಕೋಟಿ ರು. ಮೀಸಲಿರಿಸಲಾಗುತ್ತದೆ. ಈ ಮೂರೂ ಯೋಜನೆಗಳಿಂದ 2.8 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ತುಮಕೂರಲ್ಲಿ 88 ಸಾವಿರ ಉದ್ಯೋಗ:

ತುಮಕೂರಿನಲ್ಲಿ ಕೈಗಾರಿಕಾ ಜಾಲದ ನಿರ್ಮಾಣದಿಂದ 88,500 ಜನರಿಗೆ ಹಾಗೂ ಕೃಷ್ಣಪಟ್ಟಣಂನಲ್ಲಿ 98,000 ಜನರಿಗೆ ಉದ್ಯೋಗ ಲಭಿಸಲಿದೆ. ತುಮಕೂರಿನ 88,500 ಜನರ ಪೈಕಿ 17,700 ಜನರಿಗೆ ಚಿಲ್ಲರೆ ವ್ಯಾಪಾರ, ಕಚೇರಿಗಳು ಹಾಗೂ ಇತರ ವಾಣಿಜ್ಯಿಕ ಅವಕಾಶಗಳಂಥ ಸೇವಾ ಉದ್ದಿಮೆಗಳಿಂದ ಉದ್ಯೋಗ ದೊರಕಲಿದೆ ಎಂದು ಸರ್ಕಾರ ಹೇಳಿದೆ.

ವಿಶ್ವದರ್ಜೆಯ ಮೂಲಸೌಕರ್ಯ:

‘ಈ ಎರಡೂ ಯೋಜನೆಗಳು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆ ವ್ಯಾಪ್ತಿಗೆ ಬರಲಿವೆ. ಈ ನಗರಗಳು ವಿಶ್ವದರ್ಜೆಯ ಮೂಲಸೌಕರ್ಯ, ರಸ್ತೆ ಹಾಗೂ ರೈಲು ಸಂಪರ್ಕ ಹೊಂದಲಿದ್ದು, ಈ ಮೂಲಕ ಬಂದರುಗಳು ಹಾಗೂ ಔದ್ಯಮಿಕ ಕೇಂದ್ರ ಸ್ಥಾನಗಳಿಗೆ ಸುಲಭವಾಗಿ ಸರಕು ಸಾಗಿಸಬಹುದಾಗಿದೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.