ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಸಾಮಾಜಿಕ ಸಹಾಯತಾ ಕಾರ್ಯಕ್ರಮವನ್ನು ₹53,428 ಕೋಟಿ ಅನುದಾನದೊಂದಿಗೆ ಮುಂದಿನ 5 ವರ್ಷಗಳ ಕಾಲ ವಿಸ್ತರಿಸಿದೆ. ದಿವ್ಯಾಂಗರ ಪಿಂಚಣಿಗೆ ಇದ್ದ ಶೇ.80ರಷ್ಟು ಅಂಗವಿಕಲತೆ ಮಿತಿಯನ್ನು ಶೇ.40ಕ್ಕೆ ಇಳಿಸಲಾಗಿದೆ.
ನವದೆಹಲಿ (ಅ.14): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೇಶದ ಬಡವರು, ವೃದ್ಧರು, ವಿಧವೆಯರು ಹಾಗೂ ದಿವ್ಯಾಂಗರಿಗೆ ನೆರವಾಗುವ 'ರಾಷ್ಟ್ರೀಯ ಸಾಮಾಜಿಕ ಸಹಾಯತಾ ಕಾರ್ಯಕ್ರಮ'ಕ್ಕೆ (NSAP) ಬರೋಬ್ಬರಿ ₹53,428 ಕೋಟಿ ರೂಪಾಯಿಗಳ ಬೃಹತ್ ಅನುದಾನದೊಂದಿಗೆ ಮುಂದಿನ 5 ವರ್ಷಗಳ ಕಾಲ (2026-27 ರಿಂದ 2030-31 ರವರೆಗೆ) ವಿಸ್ತರಣೆಗೆ ಮುದ್ರೆ ಒತ್ತಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಲ್ಲಿಸಿದ್ದ ಈ ಪ್ರಸ್ತಾವನೆಯಡಿ, ಯೋಜನೆಯ ಸಮಗ್ರ ಚೌಕಟ್ಟನ್ನು ವಿಸ್ತರಿಸಲಾಗಿದ್ದು, ಹಲವು ಉಪ-ಯೋಜನೆಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಇದರ ಜೊತೆಗೆ ಅಂಗವಿಕಲರ ಪಿಂಚಣಿ ನಿಯಮಾವಳಿಗಳಲ್ಲಿ ಭಾರಿ ರಿಯಾಯಿತಿ ಹಾಗೂ ಸುಧಾರಣೆಗಳನ್ನು ತರಲಾಗಿದೆ.
ಸಂಪುಟ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, "ವಿಶ್ವದಲ್ಲೇ ಅತ್ಯಂತ ಸಮಗ್ರವಾದ ನಮ್ಮ ಸಾಮಾಜಿಕ ಭದ್ರತಾ ಜಾಲವನ್ನು 2031 ರವರೆಗೆ ವಿಸ್ತರಿಸಲಾಗಿದೆ. ದಿವ್ಯಾಂಗರ ಪಿಂಚಣಿಗೆ ಈ ಮೊದಲು ಶೇಕಡಾ 80% ರಷ್ಟು ಅಂಗವಿಕಲತೆ (Benchmark Disability) ಕಡ್ಡಾಯವಾಗಿತ್ತು. ಪ್ರಸ್ತುತ ಈ ಅರ್ಹತಾ ಮಿತಿಯನ್ನು ಅರ್ಧಕ್ಕಿಳಿಸಲಾಗಿದ್ದು, ಇನ್ಮುಂದೆ ಶೇಕಡಾ 40% ರಷ್ಟು ಅಂಗವಿಕಲತೆ ಹೊಂದಿರುವ ವ್ಯಕ್ತಿಗಳೂ ಸಹ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಲಿದ್ದಾರೆ" ಎಂದು ಘೋಷಿಸಿದರು.
ದಿವ್ಯಾಂಗರ ಪಿಂಚಣಿಯಲ್ಲಿ ಕೈಗೊಳ್ಳಲಾದ ಪ್ರಮುಖ ಬದಲಾವಣೆಗಳು
ವಯಸ್ಸಿನ ಮಿತಿ ರದ್ದು: ದಿವ್ಯಾಂಗರ ಪಿಂಚಣಿಗೆ ಇದ್ದ ಕನಿಷ್ಠ ವಯಸ್ಸಿನ ಅರ್ಹತಾ ನಿಯಮವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅಂಗವೈಕಲ್ಯ ಹೊಂದಿರುವ ಮಗು ಹುಟ್ಟಿನಿಂದಲೇ ಈ ಪಿಂಚಣಿಗೆ ಅರ್ಹತೆ ಪಡೆಯಲಿದೆ.
ಅಂಗವಿಕಲತೆ ಮಿತಿ ಶೇ. 40 ಕ್ಕೆ ಇಳಿಕೆ: ಪಿಂಚಣಿ ಪಡೆಯಲು ಇದ್ದ ಶೇಕಡಾ 80 ರಷ್ಟು ಅಂಗವಿಕಲತೆಯ ಕಠಿಣ ನಿಯಮವನ್ನು ಶೇಕಡಾ 40 ಕ್ಕೆ ಇಳಿಸಲಾಗಿದೆ.
ಪಿಂಚಣಿ ದರಗಳು: ನೂತನ ನಿಯಮದಂತೆ 0 ಯಿಂದ 79 ವರ್ಷದವರೆಗಿನ ದಿವ್ಯಾಂಗ ಫಲಾನುಭವಿಗಳಿಗೆ ಮಾಸಿಕ ₹375 ಹಾಗೂ 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ದಿವ್ಯಾಂಗರಿಗೆ ಮಾಸಿಕ ₹625 ಗಳ ಆರ್ಥಿಕ ನೆರವು ಸಿಗಲಿದೆ.
ಈ ನೂತನ ಮಾರ್ಗಸೂಚಿಗಳು, ಪರಿಷ್ಕೃತ ದರಗಳು ಹಾಗೂ ಫಲಾನುಭವಿಗಳ ಸಂಖ್ಯೆಯ ವಿವರಗಳನ್ನು ಒಳಗೊಂಡ ಕಂಪ್ಲೀಟ್ ಗೈಡ್ಲೈನ್ಸ್ ಅನ್ನು ಮುಂದಿನ 3 ತಿಂಗಳ ಒಳಗಾಗಿ ಇಲಾಖೆಯು ಅಧಿಕೃತವಾಗಿ ಜಾರಿಗೆ ತರಲಿದೆ.
ಹಳೆಯ ಹೆಸರುಗಳಿಗೆ ಗುಡ್ಬೈ - ನೂತನ 'ಪ್ರಧಾನ ಮಂತ್ರಿ' ಯೋಜನೆಗಳು
ಕೇಂದ್ರ ಸರ್ಕಾರವು ಯೋಜನೆಗೆ ಮರುನಾಮಕರಣ ಮಾಡಿದ್ದು, ಇನ್ಮುಂದೆ ಈ ಯೋಜನೆಗಳು ಕೆಳಗಿನ ಹೊಸ ಹೆಸರುಗಳಿಂದ ಕರೆಯಲ್ಪಡಲಿವೆ.
| ಹಳೆಯ ಹೆಸರು | ಹೊಸ ಹೆಸರು (ಮರುನಾಮಕರಣ) |
| ನ್ಯಾಷನಲ್ ಸೋಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಮ್ (NSAP) | ಪ್ರಧಾನ ಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ |
| ಇಂದಿರಾ ಗಾಂಧಿ ನ್ಯಾಷನಲ್ ಓಲ್ಡ್ ಏಜ್ ಪೆನ್ಷನ್ ಸ್ಕೀಮ್ | ಪ್ರಧಾನ ಮಂತ್ರಿ ವೃದ್ಧಾಪ್ಯ ಪಿಂಚಣಿ ಯೋಜನೆ |
| ಇಂದಿರಾ ಗಾಂಧಿ ನ್ಯಾಷನಲ್ ವಿಡೋ ಪೆನ್ಷನ್ ಸ್ಕೀಮ್ | ಪ್ರಧಾನ ಮಂತ್ರಿ ವಿಧವಾ ಪಿಂಚಣಿ ಯೋಜನೆ |
| ಇಂದಿರಾ ಗಾಂಧಿ ನ್ಯಾಷನಲ್ ಡಿಸೆಬಿಲಿಟಿ ಪೆನ್ಷನ್ ಸ್ಕೀಮ್ | ಪ್ರಧಾನ ಮಂತ್ರಿ ದಿವ್ಯಾಂಗ ಪಿಂಚಣಿ ಯೋಜನೆ |
| ನ್ಯಾಷನಲ್ ಫ್ಯಾಮಿಲಿ ಬೆನಿಫಿಟ್ ಸ್ಕೀಮ್ | ಪ್ರಧಾನ ಮಂತ್ರಿ ಪರಿವಾರ್ ಲಾಭ್ ಯೋಜನೆ |
(ಸೂಚನೆ: ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಹಾಗೂ ಕುಟುಂಬ ನೆರವು ಯೋಜನೆಗಳು ಯಾವುದೇ ಬದಲಾವಣೆಯಿಲ್ಲದೆ ಯಥಾವತ್ತಾಗಿ ಮುಂದುವರಿಯಲಿವೆ).
3.20 ಕೋಟಿ ಫಲಾನುಭವಿಗಳಿಗೆ ಅನುಕೂಲ
ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಸುಮಾರು 3.20 ಕೋಟಿ ಬಡ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಭಾರತೀಯ ಸಂವಿಧಾನದ ವಿಧಿ 41 ರ (ರಾಜ್ಯ ನೀತಿಯ ನಿರ್ದೇಶಕ ತತ್ವಗಳು) ಅಡಿಯಲ್ಲಿ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಕೇಂದ್ರ ಸರ್ಕಾರದ ಹೊಣೆಗಾರಿಕೆಯ ಭಾಗವಾಗಿ ಈ ಎನ್ಎಸ್ಎಪಿ (NSAP) ಯೋಜನೆಯನ್ನು ಪ್ರಥಮ ಬಾರಿಗೆ 1995 ರ ಆಗಸ್ಟ್ 15 ರಂದು ಜಾರಿಗೆ ತರಲಾಗಿತ್ತು. ಈ ಯೋಜನೆಗೆ ಶೇಕಡಾ 100 ರಷ್ಟು ಕೇಂದ್ರ ಸರ್ಕಾರವೇ ನೇರವಾಗಿ ಅನುದಾನ ಒದಗಿಸುತ್ತದೆ.
ದಿವ್ಯಾಂಗರ ಪಿಂಚಣಿಯಲ್ಲಿ ಮಾಡಲಾಗಿರುವ ಈ ಐತಿಹಾಸಿಕ ಬದಲಾವಣೆಗಳು 'ವಿಕಲಚೇತನರ ಹಕ್ಕುಗಳ ಕಾಯ್ದೆ, 2016' ಕ್ಕೆ (Rights of Persons with Disabilities Act, 2016) ಸಂಪೂರ್ಣವಾಗಿ ಬದ್ಧವಾಗಿವೆ. ಈ ಕಾಯ್ದೆಯು ಶೇ. 40 ಅಂಗವಿಕಲತೆಯನ್ನು ಮಾನದಂಡವಾಗಿ ಪರಿಗಣಿಸುತ್ತದೆ ಹಾಗೂ ಇತರ ಯೋಜನೆಗಳಿಗಿಂತ ಕನಿಷ್ಠ ಶೇ. 25 ರಷ್ಟು ಹೆಚ್ಚಿನ ಆರ್ಥಿಕ ನೆರವನ್ನು ದಿವ್ಯಾಂಗರಿಗೆ ನೀಡಲು ಉತ್ತೇಜಿಸುತ್ತದೆ.


