ನವದೆಹಲಿ(ಡಿ.18): ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ನಿರಾಶ್ರಿತ ಮುಸ್ಲಿಮರಿಗೆ ತೊಂದರೆಯಾಗುತ್ತದೆಯೇ ಹೊರತು, ಭಾರತದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಜಾಮಿಯಾ ಮಸೀದಿಯ ಶಾಹಿ ಇಮಾಮ್ ಸೈಯದ್‌ ಅಹ್ಮದ್ ಬುಖಾರಿ ಅಭಿಪ್ರಾಯಪಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು, ಈ ಮಧ್ಯೆ ಕಾಯ್ದೆ ಜಾರಿಯಿಂದ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗದು ಎಂಬ ಸೈಯದ್‌ ಅಹ್ಮದ್ ಬುಖಾರಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ

ಈ ಕುರಿತು ಮಾತನಾಡಿರುವ ಬುಖಾರಿ, ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯಿಂದ ಭಾರತೀಯ ಮುಸ್ಲಿಮರು ಹೆದರಬೇಕಿಲ್ಲ ಎಂದು ಅಭಯ ನೀಡಿದರು. ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್‌ಆರ್‌ಸಿ), ಪೌರತ್ವ ತಿದ್ದುಪಡಿ ಕಾಯ್ದೆಗೂ (ಸಿಎಎ) ವ್ಯತ್ಯಾಸವಿದೆ. ಸಿಎಎ ಈಗಾಗಲೇ ಕಾಯ್ದೆಯಾಗಿದೆ. ಆದರೆ, ಎನ್‌ಆರ್‌ಸಿ ಕೇವಲ ಘೋಷಣೆಯಾಗಿದೆಯೇ ಹೊರತು ಇನ್ನೂ ಕಾಯ್ದೆಯಾಗಿಲ್ಲ ಎಂದು ಬುಖಾರಿ ಹೇಳಿದರು.

ಪ್ರತಿಭಟನೆ ಎನ್ನುವುದು ಭಾರತೀಯರ ಹಕ್ಕು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಾಗ್ಯೂ, ಪ್ರತಿಭಟನೆಯ ಮಿತಿಯನ್ನು ತಿಳಿದಿರಬೇಕು. ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ನುಖಾರಿ ಸೂಚ್ಯವಾಗಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ, ಪ್ರತಿಭಟನೆ ಎರಡಕ್ಕೂ ಚೇತನ್ ಭಗತ್ ವಿರೋಧ!