4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮೋದಿ ತವರಲ್ಲಿ ಕಳೆದ 18 ವರ್ಷದಿಂದ ಬಿಜೆಪಿಗೆ ಸಿಗದ ಸ್ಥಾನ ಈ ಬಾರಿಯೂ ಕೈತಪ್ಪಿದೆ.

ನವದೆಹಲಿ (ಜೂ.24): ಇತ್ತೀಚೆಗೆ ನಡೆದ 4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಅಚ್ಚರಿಯ ರೀತಿಯಲ್ಲಿ ಬಿಜೆಪಿ ಆಡಳಿತದ ಗುಜರಾತ್‌ನ ವಿಸಾವದರ್‌ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ 18 ವರ್ಷಗಳಿಂದ ಕೈವಶವಾಗದ ಸ್ಥಾನ ವಶಪಡಿಸಿಕೊಳ್ಳುವ ಬಿಜೆಪಿ ಯತ್ನ ಮತ್ತೆ ವಿಫಲವಾಗಿದೆ.

ಇಲ್ಲಿ ಆಪ್‌ನ ಗೋಪಾಲ್ ಇಟಾಲಿಯಾ ಬಿಜೆಪಿ ಅಭ್ಯರ್ಥಿ ಸೋಲಿಸಿ, ಗೆಲುವು ಸಾಧಿಸಿದ್ದಾರೆ. ಇದು ಗುಜರಾತ್‌ನಲ್ಲಿ ಮತ್ತೆ ಬೇರೂರುವ ಯತ್ನ ಮಾಡುತ್ತಿರುವ ಆಪ್‌ಗೆ ಸಿಕ್ಕ ದೊಡ್ಡ ನೈತಿಕ ಗೆಲುವು ಎಂದು ಬಣ್ಣಿಸಲಾಗಿದೆ. ಜೊತೆಗೆ ದಿಲ್ಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ರಾಜಕೀಯದ ಹೊಸ ಅಧ್ಯಾಯ ಎನ್ನುವ ಚರ್ಚೆ ಹುಟ್ಟಿಸಿದೆ.

ಗುಜರಾತ್‌ನಲ್ಲಿ ಆಪ್

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಕಳೆದುಕೊಂಡಿತ್ತು. ಇತ್ತ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚಿಸಿದೆ.ವಿಧಾನಸಭೆ ಚುನಾವಣೆ ಫಲಿತಾಂಶದೊಂದಿಗೆ ದೆಹಲಿಯಲ್ಲಿ ಆಪ್ ದುರ್ಬಲಗೊಂಡಿತ್ತು. ಆಪ್ ನಡೆಸಿದ ಹೋರಾಟಗಳು ವಿಫಲಗೊಂಡಿತ್ತು. ನಗೆಪಾಟಲಿಗೀಡಾದ ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಪಕ್ಷ ನಿಧಾನವಾಗಿ ಇದೀಗ ತನ್ನ ನೆಲೆಯನ್ನು ಗುಜರಾತ್‌ನಲ್ಲಿ ಭದ್ರಪಡಿಸಿಕೊಳ್ಳುತ್ತಿದೆಯಾ ಅನ್ನೋ ಚರ್ಚೆ ಶುರುವಾಗಿದೆ. ಗುಜರಾತ್ ವಿಸಾವದರ್ ಕ್ಷೇತ್ರದಲ್ಲಿ ಗೆಲುವು ಸಾಧಿಸು ಮೂಲಕ ಆಪ್ ಮತ್ತೆ ಪುಟಿದೇಳುವ ಸೂಚನೆ ನೀಡಿದೆ.

ಉಳಿದಂತೆ ಪಂಜಾಬ್‌ನ ಲೂಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಆಪ್‌ನ ಸಂಜೀವ್ ಆರೋರಾ, ಕೇರಳದ ನಿಲಂಬೂರ್‌ನಲ್ಲಿ ಕಾಂಗ್ರೆಸ್‌- ಯುಡಿಎಫ್‌ ಮೈತ್ರಿ ಅಭ್ಯರ್ಥಿ ಆರ್ಯದನ್‌ ಶೌಕತ್‌, ಗುಜರಾತ್‌ನ ಕಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ಭಾಯ್‌ ಚವ್ಡಾ, ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ಟಿಎಂಸಿಯ ಅಲಿಫಾ ಅಹ್ಮದ್‌ ಗೆದ್ದಿದೆ.

ದೆಹಲಿ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೇಜ್ರಿವಾಲ್ ಒಂದರ್ಥದಲ್ಲಿ ತೆರೆಮರೆಗೆ ಸರಿದಿದ್ದರು. ಆದರೆ ಈಗ ಈ ಅವಳಿ ಗೆಲುವು ಆಪ್‌ ನಾಯಕ ರಾಜಕಾರಣದಲ್ಲಿ ಮತ್ತೆ ಸಕ್ರಿಯರಾಗಲಿದ್ದಾರೆ ಎನ್ನುವ ಚರ್ಚೆ ಹುಟ್ಟುಹಾಕಿದೆ. ಪಂಜಾಬ್‌ನಿಂದ ಕೇಜ್ರಿವಾಲ್ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ ಎನ್ನುವ ಮಾತು ಮತ್ತೆ ಮುನ್ನೆಲೆಗೆ ಬಂದಿದೆ.