ಲಖನೌ (ಆ. 20):  ಸಾಲ ವಸೂಲಿಗಾಗಿ 34 ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ಸನ್ನೇ ಫೈನಾನ್ಸ್‌ ಒಂದರ ಸಿಬ್ಬಂದಿಗಳು ಹೈಜಾಕ್‌ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಹೈಜಾಕ್‌ ಆಗಿದ್ದ ಬಸ್‌ ಮತ್ತು ಅದರಲ್ಲಿದ್ದ ಎಲ್ಲಾ 34 ಪ್ರಯಾಣಿಕರು ಸುರಕ್ಷಿತವಾಗಿ ಪತ್ತೆಯಾಗುವುದರೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ.

ಏನಾಯ್ತು?: ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಬಸ್‌ ಹೊಂದಿದ್ದು ಅದನ್ನು ಉತ್ತರಪ್ರದೇಶದಲ್ಲಿ ನೊಂದಾಯಿಸಿದ್ದಾರೆ. ಬಸ್‌ಗೆ ಅವರು ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಆದರೆ ಸಾಕಷ್ಟುಪ್ರಮಾಣದ ಸಾಲ ಬಾಕಿ ಉಳಿದಿತ್ತು.

ಓಣಂ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್

ಈ ನಡುವೆ 34 ಪ್ರಯಾಣಿಕರೊಂದಿಗೆ ಬಸ್‌ ಮಂಗಳವಾರ ರಾತ್ರಿ ಹರ್ಯಾಣದ ಗುರುಗ್ರಾಮದಿಂದ ಉತ್ತರಪ್ರದೇಶ ಮಾರ್ಗವಾಗಿ ಮಧ್ಯಪ್ರದೇಶ ಪನ್ನಾಗೆ ಪ್ರಯಾಣ ಬೆಳೆಸಿತ್ತು. ರಾತ್ರಿ 10.30ರ ವೇಳೆಗೆ ಆಗ್ರಾ ಸಮೀಪದ ಚೆಕ್‌ಪೋಸ್ಟ್‌ ಬಳಿ ಕಾರಿನಲ್ಲಿ ಬಂದ ಸಾಲ ವಸೂಲಿ ಏಜೆಂಟರ ತಂಡ, ಬಸ್ಸನ್ನು ಅಡ್ಡಗಟ್ಟಿಚಾಲಕನಿಗೆ ಕೆಳಗೆ ಇಳಿಯುವಂತೆ ಹೇಳಿದೆ. ಅದಕ್ಕೆ ಒಪ್ಪದ ಆತ ಬಸ್ಸನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ವಸೂಲಿಗಾರರ ಗುಂಪು ಮತ್ತೆ ಬಸ್ಸಿನ ಮುಂದೆ ಬಂದು ಅಡ್ಡಗಟ್ಟಿ, ಚಾಲಕ ಮತ್ತು ನಿರ್ವಾಹಕನನ್ನು ಬಲವಂತವಾಗಿ ಇಳಿಸಿ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು, ಅವರನ್ನು ಸುರಕ್ಷಿತವಾಗಿ ರಾಷ್ಟ್ರೀಯ ಹೆದ್ದಾರಿಯೊಂದರ ಬಳಿ ಬಿಟ್ಟು ಹೋಗಿದೆ.

ಬಸ್‌ನಲ್ಲಿ ಸೈಕಲ್‌ನೊಂದಿಗೆ ಪ್ರಯಾಣಿಸಿ: ಏನಿದು ಹೊಸ ಯೋಜನೆ?

ಮತ್ತೊಂದೆಡೆ ಬಸ್ಸಿಗೆ ಹತ್ತಿಕೊಂಡು ನಾಲ್ಕಾರು ಜನರ ಗುಂಪು, ನಿಮಗೆ ಯಾವುದೇ ತೊಂದರೆ ಮಾಡುವುದಿಲ್ಲ, ಕಿರುಚಬೇಡಿ ಎಂದು ಪ್ರಯಾಣಿಕರನ್ನು ಹೆದರಿಸಿ ನಿರ್ಜನ ಪ್ರದೇಶವೊಂದಕ್ಕೆ ಬಸ್‌ ಅನ್ನು ಕೊಂಡೊಯ್ದಿದೆ. ಇತ್ತ ಚಾಲಕ ಮತ್ತು ನಿರ್ವಾಹಕ ಸಮೀಪದ ಪೊಲೀಸ್‌ ಠಾಣೆಗೆ ಹೋಗಿ, ಮಾಹಿತಿ ನೀಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ಇಷ್ಟೆಲ್ಲಾ ರಾದ್ಧಾಂತವಾದ ಮೇಲೆ ಹಣ ಬಾಕಿ ಉಳಿಸಿಕೊಂಡ ಕಾರಣಕ್ಕಾಗಿ ಬಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫೈನಾನ್ಸ್‌ ಕಂಪನಿ ಹೇಳಿಕೆ ನೀಡಿದೆ. ಈ ನಡುವೆ ಫೈನಾನ್ಸ್‌ ಕಂಪನಿ ವಿರುದ್ಧ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಂಗಳವಾರವಷ್ಟೇ ಬಸ್‌ ಮಾಲೀಕ ಮೃತಪಟ್ಟಿದ್ದು, ಆತನ ಪುತ್ರ ತಂದೆಯ ಕ್ರಿಯೆ ನಡೆಸುತ್ತಿದ್ದ ಎನ್ನಲಾಗಿದೆ.