ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ 50 ಅಡಿ ಎತ್ತರದ ಸೇತುವೆಯಿಂದ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ 15 ಮಂದಿ ಸಾವು ಕಂಡಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೋಪಾಲ್ (ಮೇ.9): ಅಂದಾಜು 80 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್, 50 ಅಡಿ ಎತ್ತರದ ಸೇತುವೆಯಿಂದ ಉರುಳಿ ಬಿದ್ದ ಪರಿಣಾಮ 15 ಮಂದಿ ದುರ್ಮರಣಕ್ಕೀಡಾಗಿದ್ದು, ಕನಿಷ್ಠ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಭೀಕರ ಘಟನೆ ನಡೆದಿದ್ದು, ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಮೃತರಿಗೆ 5 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 50,000 ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ 25,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಘೋಷಣೆ ಮಾಡಿದ್ದಾರೆ. ಇಂದೋರ್‌ಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಡೊಂಗರ್‌ಗಾಂವ್ ಪ್ರದೇಶದಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡ ವ್ಯಕ್ತಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣದ ಕುರಿತಾಗಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ.
ಡೊಂಗರಗಾಂವ್ ಮತ್ತು ದಸಂಗ ನಡುವಿನ ಬೋರಾಡ್ ನದಿ ಸೇತುವೆಯ ಅಡ್ಡಪಟ್ಟಿ ಮುರಿದು ಬಸ್ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ನದಿ ಬತ್ತಿ ಹೋಗಿದ್ದ ಕಾರಣ, ಮುಳುಗಡೆಯ ಅಪಾಯ ತಪ್ಪಿದೆ. ಆಂಬ್ಯುಲೆನ್ಸ್ ಮತ್ತು ಆಡಳಿತ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಖಾರ್ಗೋನ್‌ನ ಬೇಜಾಪುರದಿಂದ ಇಂದೋರ್ ಕಡೆಗೆ ಬಸ್ ಹೋಗುತ್ತಿತ್ತು ಎಂದು ಐಜಿ ರಾಕೇಶ್ ಗುಪ್ತಾ ತಿಳಿಸಿದ್ದಾರೆ. ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು, ರೈಲಿಂಗ್ ಮುರಿದು ಬಿದ್ದಿದೆ. ನದಿ ಬತ್ತಿದ್ದರಿಂದ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ 15 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರಕ್ಷಣೆ ಮುಂದುವರೆದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಪೊಲೀಸರು ಬರುವ ಮುನ್ನವೇ ಗ್ರಾಮಸ್ಥರು ಬಸ್‌ನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನ ಮಾಡಿದ್ದಾರೆ ಎಂದು ಖಾರ್ಗೋನ್‌ನ ಎಸ್‌ಡಿಎಂ ಪೊಲೀಸ್ ರಾಕೇಶ್ ಮೋಹನ್ ಶುಕ್ಲಾ ತಿಳಿಸಿದ್ದಾರೆ. ಬಸ್ಸಿನ ಗಾಜು ಒಡೆದು ಗಾಯಗೊಂಡಿದ್ದ ಹಲವು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ನಾಗರಿಕರು ಅವರನ್ನೂ ತಮ್ಮ ಸ್ವಂತ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದರು ಎಂದು ಅವರು ಹೇಳಿದರು.
ಜಿಲ್ಲಾ ಕೇಂದ್ರದಿಂದ ಸುಮಾರು 34 ಕಿಮೀ ದೂರದಲ್ಲಿರುವ ಆ ಪೊಲೀಸ್ ಠಾಣೆ ವ್ಯಾಪ್ತಿಯ ಡೊಂಗರಗಾಂವ್ ಬಳಿ ಅಪಘಾತ ಸಂಭವಿಸಿದೆ ಎಂದು ಎಸ್‌ಡಿಎಂ ತಿಳಿಸಿದೆ. ಸದ್ಯ ಬಸ್ ಚಾಲಕ ಪತ್ತೆಯಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ಚಾಲಕ ನಿದ್ರೆ ಮಾಡುತ್ತಿದ್ದ ಕಾರಣಕ್ಕೆ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
Tumakuru: ಪಾವಗಢ ಬಸ್ ದುರಂತದಲ್ಲಿ 20 ಹೆಚ್ಚು ಮಂದಿ ಸಾವು.?
ಮಾ ಶಾರದಾ ಟ್ರಾವೆಲ್ಸ್‌ನ ಬಸ್‌ನಲ್ಲಿ 80 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಡೊಂಗರಗಾಂವ್ ನಿವಾಸಿ ರಾಜ್ ಪಾಟಿದಾರ್ ತಿಳಿಸಿದ್ದಾರೆ. ಅಪಘಾತದ ನಂತರ ಡೊಂಗರಗಾಂವ್ ಮತ್ತು ಲೋನಾರ ಗ್ರಾಮದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಬಸ್ಸಿನ ಗಾಜು ಒಡೆದು ಗಾಯಾಳುಗಳನ್ನು ಹೊರ ತೆಗೆಯಲಾಯಿತು. ಗ್ರಾಮದಿಂದ ಬಸ್ ಹೊರಟ ಐದೇ ನಿಮಿಷದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ಸು ಅತಿವೇಗದಲ್ಲಿ ಚಲನೆ ಮಾಡುತ್ತಿತ್ತು ಎನ್ನಲಾಗಿದೆ.
