ನೇಪಾಳದ ಲುಂಬಿನಿಯಲ್ಲಿ ಪ್ರಧಾನಿ ಮೋದಿ ಭಾಷಣ ಬುದ್ಧ ಪೂರ್ಣಿಮೆ ಹಿನ್ನಲೆಯಲ್ಲಿ ನೇಪಾಳಕ್ಕೆ ಮೋದಿ ಭೇಟಿ ನೇಪಾಳವಿಲ್ಲದ ಶ್ರೀರಾಮ ಅಪೂರ್ಣ, ಮೋದಿ ಭಾಷಣ ಹೈಲೈಟ್ಸ್ ಇಲ್ಲಿದೆ

ಲುಂಬಿನಿ(ಮೇ.16): ಭಗವಾನ್ ಬುದ್ಧನ ಆದರ್ಶದಲ್ಲಿ ಭಾರತ ಮುನ್ನಡೆಯುತ್ತಿದೆ. ಬುದ್ಧನ ಜೊತೆ ನನಗೆ ಹೇಳಲೇಬೇಕಾದ ಸಂಬಂಧವಿದೆ. ನಾನು ಹುಟ್ಟಿದ್ದು ಗಜರಾತ್‌ನ ವಡ್ನಗರದಲ್ಲಿ. ಇಲ್ಲಿ ಬುದ್ಧನ ಅತೀ ದೊಡ್ಡ ಶ್ರದ್ಧಾ ಕೇಂದ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲುಂಬಿನಿ ವಿಶ್ವವಿದ್ಯಾಲಯ, ಕಾಠ್ಮಂಡು ವಿಶ್ವವಿದ್ಯಾಲಯ ಅಭಿವೃದ್ಧಿಯಲ್ಲಿ ಭಾರತ ಕೈಜೋಡಿಸಲಿದೆ. ಬುದ್ಧನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರದ ಮೂಲಕ ವಿಶ್ವಕ್ಕೆ ಬುದ್ಧನ ಸಂದೇಶವನ್ನು ಸಾರುವ ಕೆಲಸವನ್ನು ಭಾರತ ಹಾಗೂ ನೇಪಾಳ ಜಂಟಿಯಾಗಿ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ. 

ಬುದ್ಧ ಪೂರ್ಣಿಮಾ ಹಿನ್ನಲೆಯಲ್ಲಿ ನೇಪಾಳಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಬುದ್ಧನ ಜನ್ಮಸ್ಥಳ ಲುಂಬಿನಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೋದಿ ನೇಪಾಳಿ ಭಾಷೆಯಲ್ಲಿ ಬುದ್ಧ ಪೂರ್ಣಿಮಾ ಶುಭಕೋರಿದ ಭಾಷಣ ಆರಂಭಿಸಿದರು.

ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ: ಮಾಯಾದೇವಿ ದೇಗುಲದಲ್ಲಿ ಪೂಜೆ

ಬುದ್ಧ ಪೂರ್ಣಿಮಾ ಆಚರಿಸಲು ನೇಪಾಳ ಮಿತ್ರ ರಾಷ್ಟ್ರ, ಬುದ್ಧನ ಜನ್ಮಸ್ಥಳದಲ್ಲಿ ಆಚರಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಇಂದು ಮಾಯ ದೇವಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವೂ ನನಗೆ ಸಿಕ್ಕಿದೆ. ಪವಿತ್ರ ಸ್ಥಳದಲ್ಲಿ ನಿಲ್ಲುವ ಸೌಭಾಗ್ಯ ಸಿಕ್ಕಿದೆ ಎಂದು ಮೋದಿ ಹೇಳಿದರು.

ನಮ್ಮ ಶ್ರೀರಾಮನ ಜೊತೆಗೆ ಅವಿನಾಭವ ಸಂಬಂಧವಿರುವ ರಾಷ್ಟ್ರ ನೇಪಾಳ. ನೇಪಾಳವಿಲ್ಲದೆ ನಮ್ಮ ಶ್ರೀರಾಮ ಅಪೂರ್ಣ. ಭಾರತದಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದು ನೇಪಾಳ ಜನತೆಗೂ ಅತೀವ ಸಂತಸ ನೀಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.

ಬುದ್ಧ ಮಾನವತವಾದ ಅವತಾರ, ಬುದ್ಧ ಎಂದರೆ ಶಿಕ್ಷಣ, ಬುದ್ಧ ಎಂದರೆ ವಿಚಾರ, ಬುದ್ಧ ಎಂದರೆ ಸಂಸ್ಕಾರ. ಬುದ್ಧ ಕೇವಲ ಉಪದೇಶ ಮಾತ್ರ ನೀಡಿಲ್ಲ, ಕರುಣೆ, ತ್ಯಾಗ, ಪ್ರೀತಿಯನ್ನು ಕಲಿಸಿಕೊಟ್ಟಿದ್ದಾರೆ. ತಪಸ್ಸು ಮಾಡಿ, ಸಂಶೋಧನೆ ಮಾಡಿ ನಮಗೆ ದಾರಿದೀಪವಾಗಿದ್ದಾರೆ. ಈ ಮೂಲಕ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಟ್ಟಕೊಂಡರು ಎಂದು ಮೋದಿ ಹೇಳಿದ್ದಾರೆ. 

ಲುಂಬಿನಿಯ ಮಹಾಮಾಯ ಮಂದಿರದಲ್ಲಿ ಪೂಜೆ ಮಾಡಿದ ಮೋದಿ, 2014ರ ಬಳಿಕ 5ನೇ ನೇಪಾಳ ಪ್ರವಾಸ!

ಭಾರತ ನೇಪಾಳ ಗಡಿಯಲ್ಲಿ ಚೆಕ್ ಪೋಸ್ಟ್ ಸುಧಾರಿಸುವ ಕೆಲಸ ಭಾರತ ಸರ್ಕಾರ ಮಾಡುತ್ತಿದೆ. ಇದರಿಂದ ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಸುಲಭವಾಗಿ ನೇಪಾಳಕ್ಕೆ ತರಳಲು ಸಾಧ್ಯವಾಗಲಿದೆ. ಇದರಿಂದ ನೇಪಾಳದ ಪ್ರವಾಸೋದ್ಯಮ ಕೂಡ ಅಭಿವೃದ್ಧಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. 

ಲುಂಬಿನಿಯಲ್ಲಿ ಆಯೋಜಿಸಿದ ಕಾರ್ಯಕ್ರಮ ಉಭಯ ದೇಶಗಳ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡಿದೆ. ಬಳಿಕ ಬುದ್ಧನ ಪ್ರಾರ್ಥನಾ ಗೀತೆ ಹಾಡುವ ಮೂಲಕ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಆರಂಭಿಸಲಾಯಿತು. ಮೊದಲು ಮಾತನಾಡಿದ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ, ಕೋವಿಡ್ ಕಾರಣ ಕಳೆದೆರಡು ವರ್ಷ ಬುದ್ಧ ಪೂರ್ಣಿಮಾ ಆಚರಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಆಗಮಿಸುವ ಮೂಲಕ ಮತ್ತಷ್ಟು ಮೆರುಗು ನೀಡಿದ್ದಾರೆ ಎಂದರು.

ಪ್ರಧಾನಿ ಮೋದಿ ಭೇಟಿಯಿಂದ ಭಾರತ ಹಾಗೂ ನೇಪಾಳದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ನಾಗರೀಕರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ದೇವುಬಾ ಹೇಳಿದರು. ಲುಂಬಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬುದ್ಧನ ಕೇಂದ್ರವಾಗಿ ಅಭಿವೃದ್ಧಿ ಮಾಡಲು ನೇಪಾಳ ಬದ್ಧವಾಗಿದೆ. ಇದಕ್ಕೆ ಭಾರತ ನರೆವು ನೀಡಿದೆ ಎಂದರು. 

ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ತೆರಳಿದರು. ಪ್ರಧಾನಿ ಮೋದಿಯನ್ನು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಬಳಿಕ ಮಾಯಾ ದೇವಿ ದೇಗುಲಕ್ಕೆ ತೆರಳಿದ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಲುಂಬಿನಿಯಲ್ಲಿರುವ ಪವಿತ್ರ ಮಾಯಾ ದೇವಿ ದೇಗುಲ ದರ್ಶನದೊಂದಿಗೆ ನೇಪಾಳ ಪ್ರವಾಸ ಆರಂಭಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದರು. ಲುಂಬಿನಿ ಮಠದ ಆವರಣದಲ್ಲಿ ಅಂತರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ನಿರ್ಮಾಣದ ಶಂಕುಸ್ಥಾನಪನೆಯನ್ನು ಮೋದಿ ನೆರವೇರಿಸಿದರು. ಭಾರತವು ವಿಶ್ವದ ಬೌದ್ಧಧರ್ಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.ಆದರೆ ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಪ್ರಮುಖ ಕೇಂದ್ರ ಇರಲಿಲ್ಲ. ಇದೀಗ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಈ ಕೊರಗನ್ನು ನೀಗಿಸಲಿದೆ. 

ಥೈಲ್ಯಾಂಡ್, ಕೆನಡಾ, ಕಾಂಬೋಡಿಯಾ, ಮ್ಯಾನ್ಮಾರ್, ಶ್ರೀಲಂಕಾ, ಸಿಂಗಾಪುರ್, ಫ್ರಾನ್ಸ್, ಜರ್ಮನಿ, ಜಪಾನ್, ವಿಯೆಟ್ನಾಂ, ಆಸ್ಟ್ರಿಯಾ, ಚೀನಾ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳು ಸನ್ಯಾಸಿಗಳ ವಲಯದಲ್ಲಿನ ಯೋಜನೆಗಳು ಲುಂಬಿನಿಯ್ಲಲಿ ತಲೆ ಎತ್ತಲಿರುವ ನೂತನ ಕೇಂದ್ರಗಳಿಂದ ಪ್ರತಿನಿಧಿಸಲ್ಪಡುತ್ತವೆ. ನೇಪಾಳ ಸರ್ಕಾರದ ಲುಂಬಿನಿ ಮಾಸ್ಟರ್ ಪ್ಲಾನ್ ಅಡಿಯಲ್ಲಿ, 1978 ರಲ್ಲಿ ಅನುಮೋದಿಸಲಾಗಿದೆ, ಲುಂಬಿನಿ ಮೊನಾಸ್ಟಿಕ್ ವಲಯವು ಬೌದ್ಧ ಮಠಗಳು ಮತ್ತು ವಿವಿಧ ಪಂಗಡಗಳು ಮತ್ತು ದೇಶಗಳ ಯೋಜನೆಗಳನ್ನು ಹೊಂದಿರುವ ಸ್ಥಳವಾಗಿ ಅಸ್ತಿತ್ವಕ್ಕೆ ಬಂದಿತು.

ಕಳೆದ ಮೂರು ದಶಕಗಳಲ್ಲಿ ಲುಂಬಿನಿಯಲ್ಲಿ ಕೇಂದ್ರ ನಿರ್ಮಾಣ ಕಾರ್ಯ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ನಿರ್ಮಾಣಕ್ಕೆ ಮಹತ್ವದ ಮಾತುಕತೆ ನಡೆಸಿ, ಎದುರಾಗಿದ್ದ ಹಲವು ಸವಾಲುಗಳನ್ನು ನಿವಾರಿಸಲಾಯಿತು. ಇದೀಗ ಕೇಂದ್ರ ನಿರ್ಮಾಣ ಕಾರ್ಯ ಆರಂಭಗೊಂಡಿದೆ.