ನವದೆಹಲಿ: ಸುತ್ತಲೂ ಬೆಂಕಿ ಆವರಿಸಿಕೊಂಡಿದೆ. ನನಗೆ ಉಸಿರಾಡಲೂ ಆಗುತ್ತಿಲ್ಲ. ತಪ್ಪಿಸಿಕೊಳ್ಳಲು ಯಾವ ದಾರಿಯೂ ಉಳಿದಿಲ್ಲ. ನಾನು ಬದುಕಿ ಬರುವುದಿಲ್ಲ. ಮನೆಯವರನ್ನು ಚೆನ್ನಾಗಿ ನೋಡಿಕೋ. ಇದೆಲ್ಲಾ ದೇವರ ಇಚ್ಛೆ.

- ಇದು ದೆಹಲಿಯಲ್ಲಿ ಬೆಂಕಿಗೆ ತುತ್ತಾದ ಕಾರ್ಖಾನೆಯಲ್ಲಿ ಸಾವಿನ ದವಡೆಯಲ್ಲಿ ಸಿಕ್ಕಿದ್ದ ಕಾರ್ಮಿಕನೊಬ್ಬ ಕೊನೆಯದಾಗಿ ಕರೆ ಮಾಡಿ ತನ್ನ ಸಹೋದರನೊಂದಿಗೆ ಅಸಹಾಯಕತೆ ವ್ಯಕ್ತ ಪಡಿಸಿದ ಪರಿ.

ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕನಾಗಿ ದುಡಿಯುತ್ತಿದ್ದ ಉತ್ತರ ಪ್ರದೇಶದ ಬಿಜ್ನೋರ್‌ನ ಮುಶರ್ರಫ್‌ ಅಲಿ (30), ತನ್ನ ಸಹೋದರನಿಗೆ ಕರೆ ಮಾಡಿ ಕಾರ್ಖಾನೆಗೆ ಬೆಂಕಿ ಬಿದ್ದ ವಿಚಾರ ತಿಳಿಸಿದ್ದಾನೆ. ಅಲ್ಲದೇ ಬೆಂಕಿ ಪೂರ್ಣವಾಗಿ ಆವರಿಸಿಕೊಂಡಿದ್ದು, ಉಸಿರಾಡಲು ಸಾಧ್ಯವಾಗುತ್ತಿಲ್ಲ. ಬದುಕಿ ಬರುವ ಯಾವ ದಾರಿಯೂ ಕಾಣುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾನೆ. ಅಲ್ಲದೇ ನಾನು ಸತ್ತ ಬಳಿಕ ನನ್ನ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೋ. ಇನ್ನು ಮೂರರಿಂದ ನಾಲ್ಕು ನಿಮಿಷ ನಾನು ಬದುಕಿರಬಹುದು. ಇದೆಲ್ಲಾ ದೈವ ಇಚ್ಛೆ. ನಾಳೆ ದೆಹಲಿಗೆ ಬಂದು ನನ್ನ ಮೃತದೇಹವನ್ನು ತೆಗೆದುಕೊಂಡು ಹೋಗಿ ಎಂದು ವಿನಂತಿಸಿದ್ದಾನೆ. ಅಲ್ಲದೆ ನನ್ನ ಸಾವಿನ ವಿಷಯವನ್ನು ಮೊದಲು ಮನೆಯಲ್ಲಿನ ಹಿರಿಯರಿಗೆ ತಿಳಿಸು ಎಂದು ಅಣ್ಣನಲ್ಲಿ ಕೋರಿಕೊಂಡಿದ್ದಾನೆ.

ಈ ವೇಳೆ ಜೀವ ಉಳಿಸಿಕೊಳ್ಳಲು ಯತ್ನಿಸು ಎಂದು ಸೋದರ ತಿಳಿಸಿದ ವೇಳೆ, ಅಂಥ ಯಾವುದೇ ಅವಕಾಶವೂ ಉಳಿದಿಲ್ಲ ಎಂದು ನೋವಿನಿಂದ ಮುಷರ್ರಫ್‌ ಹೇಳಿದ್ದಾನೆ.